ಪ್ರಿಯಕರನ ಜೊತೆ ಸೇರಿ ತಾಳಿ ಕಟ್ಟಿದ ಗಂಡನನ್ನೇ ಮುಗಿಸಿ ಇಬ್ಬರೂ ಜೈಲುಪಾಲಾದ್ರು!

ಚಿಕ್ಕಬಳ್ಳಾಪುರ: ಗಂಡನನ್ನೇ ಕೊಲೆಗೈದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಬಳ್ಳಾಪುರದ 8ನೇ ವಾರ್ಡಿನಲ್ಲಿ 30 ವರ್ಷದ ಛಾಯಾಕುಮಾರ್ ಎಂಬಾತ ಮನೆಯ ಮುಂದೆ ಕೊಲೆಯಾಗಿ ಹೋಗಿದ್ದನು. ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪತ್ನಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಕೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ.

ಕೊಲೆ ಮಾಡಿದ್ದು ಯಾಕೆ?
ಮೂಲತಃ ಸೂಲಕುಂಟೆ ಗ್ರಾಮದ ಟ್ರಾಕ್ಟರ್ ಚಾಲಕನಾಗಿದ್ದ ಮೃತ ಛಾಯಾಕುಮಾರ್ ಹಾಗೂ ಜಾನಕಿಗೆ ಮದುವೆಯಾಗಿ 4 ವರ್ಷಗಳು ಕಳೆದಿದ್ದು, ಒಂದು ಮಗು ಕೂಡ ಇದೆ. ಆದ್ರೆ ಮಗುವಾದ ಬಳಿಕ ಕುಡಿತದ ದಾಸನಾಗಿದ್ದ ಛಾಯಾಕುಮಾರ್ ಜಾನಕಿ ಮೇಲೆ ಹಲ್ಲೆ ಮಾಡುತ್ತಿದ್ದನು. ವಾರಕ್ಕೊಂದು ಸಲ ಅಥವಾ ಎರಡು ಸಲ ಮಾತ್ರ ಮನೆಗೆ ಬರ್ತಿದ್ದನು. ಬಂದಾಗ ಕುಡಿದ ಅಮಲಿನಲ್ಲಿ ಜಾನಕಿ ಮೇಲೆ ಹಲ್ಲೆ ಮಾಡ್ತಿದ್ದನು ಅಂತ ಪತ್ನಿ ಜಾನಕಿ ಪೊಲೀಸರಿಗೆ ತಿಳಿಸಿದ್ದಾಳೆ. ಇದನ್ನೂ ಓದಿ: ತಾಳಿ ಕಟ್ಟಿದ ಗಂಡನನ್ನೇ ಚೂರಿಯಿಂದ ಇರಿದು ಬರ್ಬರವಾಗಿ ಕೊಲೆಗೈದ್ಳಾ ಪತ್ನಿ?

ಗಂಡನ ಹಲ್ಲೆಯಿಂದಾಗಿ ಬೇಸತ್ತ ಜಾನಕಿ ಮಂಚೇನಹಳ್ಳಿ ಬಳಿಯ ಆರ್ಕುಂದ ಗ್ರಾಮದ ಕುಮಾರ್ ಎಂಬಾತನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ. ಗಂಡ ಪದೇ ಪದೇ ಕುಡಿದು ಬಂದು ಹೊಡಿತಾನೆ ಅಂತ ಜಾನಕಿ ಹಾಗೂ ಪ್ರಿಯಕರ ಕುಮಾರ್ ಇಬ್ಬರು ಸೇರಿ ಕೊಲೆ ಮಾಡೋಕೆ ಪ್ಲಾನ್ ಮಾಡಿದ್ದಾರೆ. ಅಲ್ಲದೇ ಒಂದು ತಿಂಗಳ ಮೊದಲೇ ಕುಮಾರ್ ಚಾಕುವೊಂದನ್ನು ತಂದು ಜಾನಕಿಗೆ ಕೊಟ್ಟಿದ್ದಾನೆ. ಕೊಲೆಯಾದ ದಿನ ಛಾಯಾಕುಮಾರ್ ಮಧ್ಯರಾತ್ರಿ ಮನೆಗೆ ಬರ್ತಾನೆ ಅನ್ನೋದನ್ನು ಖಾತ್ರಿ ಮಾಡಿಕೊಂಡ ಜಾನಕಿ ಪ್ರಿಯಕರನನ್ನು ಮನೆಗೆ ಕರೆಸಿಕೊಂಡಿದ್ದಳು. ಮಧ್ಯರಾತ್ರಿ ಮನೆಗೆ ಬಂದ ಛಾಯಾಕುಮಾರ್ ಮೇಲೆ ಮುಗಿಬಿದ್ದ ಜಾನಕಿ ಹಾಗೂ ಪ್ರಿಯಕರ ಕುಮಾರ್ ಹಲ್ಲೆ ಮಾಡಿದ್ದಾರೆ. ಈ ವೇಳೆ ಮೂವರ ಮಧ್ಯೆ ನಡೆದ ಜಗಳ ತಾರಕಕ್ಕೇರಿದ್ದು, ಕುಮಾರ್ ಚಾಕುವಿನಿಂದ ಛಾಯಾಕುಮಾರ್ ಕುತ್ತಿಗೆಗೆ ಇರಿದಿದ್ದಾನೆ. ಮನೆಯಲ್ಲಿ ಆರಂಭವಾದ ಜಗಳ ಮನೆಯ ಹೊರಗಡೆಯವರೆಗೂ ನಡೆದು ಕೊನೆಗೆ ಮರಳು ದಿಬ್ಬದ ಮೇಲೆ ಛಾಯಾಕುಮಾರ್ ಕುಸಿದು ಮೃತಪಟ್ಟಿದ್ದಾನೆ.

ನನಗೇನು ಗೊತ್ತಿಲ್ಲವೆಂದಿದ್ದಳು: ಕೊಲೆ ನಡೆದ ಬಳಿಕ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಛಾಯಕುಮಾರ್ ಪತ್ನಿಯ ಬಳಿಕ ಹೇಳಿಕೆ ಪಡೆದಿದ್ದರು. ಈ ವೇಳೆ ನನಗೆ ಏನು ಗೊತ್ತಿಲ್ಲ ಸರ್ ಅಂತ ಕಥೆ ಕಟ್ಟಿದ್ದಳು. ಆದ್ರೆ ಬಲವಾದ ಅನುಮಾನದ ಮೇಲೆ ಜಾನಕಿಯನ್ನ ವಶಕ್ಕೆ ಪಡೆದು ಪೊಲೀಸರು ಬೆಂಡೆತ್ತಿ ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾಳೆ.

ಸದ್ಯ ಚಿಕ್ಕಬಳ್ಳಾಪುರ ಪೊಲೀಸರು ಪಾತಕಿ ಪತ್ನಿ ಜಾನಕಿ ಹಾಗೂ ಪ್ರಿಯಕರ ಕುಮಾರ್ ನನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

Comments

Leave a Reply

Your email address will not be published. Required fields are marked *