ಚುನಾವಣೆ ಹತ್ತಿರ ಬಂದ್ರೂ ಮಂಡ್ಯದಲ್ಲಿ ಅಂಬಿ, ರಮ್ಯಾ ನಾಪತ್ತೆ!

ಮಂಡ್ಯ: ಚುನಾವಣೆ ದಿನಾಂಕ ಘೋಷಣೆಯಾದರೂ ಮಾಜಿ ಸಂಸದೆ ರಮ್ಯಾ ಹಾಗೂ ಮಾಜಿ ಸಚಿವ ಅಂಬರೀಶ್ ನಡೆ ಏನು ಅಂತ ಗೊತ್ತಾಗುತ್ತಿಲ್ಲ. ಇತ್ತ ಮಂಡ್ಯ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಅಂತಿಮವಾಗದ ಹೊರತು ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಅಭ್ಯರ್ಥಿ ಘೋಷಣೆ ಮಾಡದಿರಲು ತೀರ್ಮಾನಿಸಿವೆ ಎಂಬ ಮಾತು ಕೇಳಿ ಬರುತ್ತಿದೆ.

ಇನ್ನೇನು ಚುನಾವಣೆ ಹತ್ತಿರ ಬರುತ್ತಿದೆ. ಆದ್ರೆ ರಮ್ಯಾ ಮತ್ತು ಅಂಬರೀಶ್ ಮಾತ್ರ ಮಂಡ್ಯ ಕಡೆಗೆ ತಲೆ ಹಾಕಿಲ್ಲ. ಇದರಿಂದ ಮಂಡ್ಯ ಜನ ತಮಗೆ ತೋಚಿದಂತೆ ಮಾತಾಡಿಕೊಳ್ಳುತ್ತಿದ್ದಾರೆ. ಕಳೆದೊಂದು ವರ್ಷದಿಂದ ಮಂಡ್ಯ ಕಡೆ ತಲೆ ಹಾಕದ ರಮ್ಯಾ ಈಗೇನಾದರೂ ಹೋದರೆ ಇಷ್ಟು ದಿನ ಎಲ್ಲಿದ್ರಿ. ಹೀಗ್ಯಾಕೆ ಬಂದ್ರಿ ಅಂತ ಮಂಗಳಾರತಿ ಗ್ಯಾರಂಟಿ. ಮತ್ತೊಂದು ಕಡೆ ರಮ್ಯಾರಿಗೆ ಕಾಂಗ್ರೆಸ್‍ನಲ್ಲಿ ಪ್ರಾಧ್ಯಾನ್ಯತೆ ಸಿಗುತ್ತಿಲ್ಲ ಅನ್ನೋದು ಕೆಲವರ ಮಾತು. ಇನ್ನು ಆಗೊಮ್ಮೆ ಈಗೊಮ್ಮೆ ಮಂಡ್ಯಕ್ಕೆ ಹೋಗುತ್ತಿದ್ದ ಅಂಬರೀಶ್ ನಾನು ಎಲೆಕ್ಷನ್‍ಗೆ ನಿಲ್ಲೋದು, ಬಿಡೋದು ನನಗೆ ಬಿಟ್ಟಿದ್ದು. ಆದರೆ ಮಂಡ್ಯದ ಬಿಫಾರಂ ಮಾತ್ರ ನನಗೆ ಕೈಗೇ ಕೊಡಬೇಕು ಅಂತ ಪಟ್ಟು ಹಿಡಿದಿದ್ದಾರೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಮಾಜಿ ಸಚಿವ ಅಂಬರೀಶ್‍ಗೆ ಕೆ.ಸಿ ವೇಣುಗೋಪಾಲ್ ಖಡಕ್ ಸೂಚನೆ!


ರಮ್ಯಾ ಮತ್ತು ಅಂಬಿ ನಡೆಯಿಂದಾಗಿ ಮಂಡ್ಯ ಕ್ಷೇತ್ರದ ಜೆಡಿಎಸ್, ಬಿಜೆಪಿ ಅಭ್ಯರ್ಥಿ ಆಯ್ಕೆಯೂ ಫೈನಲ್ ಆಗುತ್ತಿಲ್ಲ. ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಫೈನಲ್ ಆದ ಬಳಿಕವೇ ತಮ್ಮ ಗೇಮ್ ಶುರು ಮಾಡಲು ಜೆಡಿಎಸ್ ಮತ್ತು ಬಿಜೆಪಿ ನಿರ್ಧರಿಸಿವೆ ಎನ್ನಲಾಗಿದೆ. ಮಂಡ್ಯ ಜೆಡಿಎಸ್‍ನ ಭದ್ರಕೋಟೆಯಾಗಿದೆ. ನಾವು ಯಾರಿಗೂ ಹೆದರಬೇಕಾಗಿಲ್ಲ. ಜೆಡಿಎಸ್‍ನಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿರುವುದರಿಂದ ಅಭ್ಯರ್ಥಿ ಆಯ್ಕೆ ತಡವಾಗುತ್ತಿದೆ ಎಂದು ಜೆಡಿಎಸ್ ಮುಖಂಡರು ಹೇಳುತ್ತಿದ್ದಾರೆ.

ರಮ್ಯಾ ಮತ್ತು ಅಂಬರೀಶ್ ಇಬ್ಬರೂ ತಮ್ಮದೇ ಆದ ವರ್ಚಸ್ಸು ಹೊಂದಿರುವ ಸ್ಟಾರ್ ರಾಜಕಾರಣಿಗಳಾಗಿದ್ದಾರೆ. ಅವರಿಬ್ಬರೂ ಮಂಡ್ಯಕ್ಕೆ ಬಂದು ಅಧಿಕೃತವಾಗಿ ಪ್ರಚಾರ ಆರಂಭಿಸುವರೆಗೂ ಅವರಿಬ್ಬರ ಬಗ್ಗೆ ದಿನಕ್ಕೊಂದು ಗಾಸಿಪ್ ಹುಟ್ಟಿಕೊಳ್ಳೋದ್ರಲ್ಲಿ ಅನುಮಾನವಿಲ್ಲ.

Comments

Leave a Reply

Your email address will not be published. Required fields are marked *