ಚುನಾವಣಾ ಸಮಯದಲ್ಲಿ ಕರ್ನಾಟಕದ ಪ್ರತಿಭೆಯ ಬಗ್ಗೆ ರಮ್ಯಾ ಮೆಚ್ಚುಗೆ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ದೂರದಿಂದಲೇ ಗುರಿಯಿಟ್ಟು ಕೊರಳಿಗೆ ಹೂವಿನ ಹಾರ ಎಸೆದ ಅಭಿಮಾನಿಯನ್ನು ಮೆಚ್ಚಿ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಟ್ವೀಟ್ ಮಾಡಿದ್ದಾರೆ.

ಹಾರ ಎಸೆದ ಅಭಿಮಾನಿಯನ್ನು ರಮ್ಯಾ”Karnataka’s got talent!”  ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‍ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನರು ಈ ರೀತಿ ಹೂವಿನ ಹಾರ ಎಸೆದಿರುವುದನ್ನು ಖಂಡಿಸಿದ್ದಾರೆ. ರಾಹುಲ್‍ಗೆ ಒದಗಿಸಿದ್ದ ಭದ್ರತೆ ಬಗ್ಗೆ ಆತಂಕ ವ್ಯಕ್ತಪಡಿಸಿ ರಾಜೀವ್ ಗಾಂಧಿ ಸಾವನ್ನು ನೆನಪಿಸಿಕೊಂಡಿದ್ದಾರೆ.

ಇನ್ನು ಕೆಲವರು ವ್ಯಕ್ತಿಯ ಪ್ರತಿಭೆಯನ್ನು ಮೆಚ್ಚಿದರೆ, ಕೆಲವರು ಎಂತಹ ಕೈ ಚಳಕ ಎಂದು ಹೊಗಳಿದ್ದಾರೆ. ಕೆಲವರು ಅವರ ನಾಯಕನಿಗೆ ಹಾರ ಹಾಕಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ ಆದರೆ ರಾಹುಲ್ ಗಾಂಧಿಯವರಲ್ಲಿ ಪ್ರತಿಭೆಯಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು ಪ್ರತಿಭೆ ಹೌದು. ಆದರೆ ಭವಿಷ್ಯದ ಭಾರತದ ಪ್ರಧಾನಿಯ ಭದ್ರತೆಯ ಬಗ್ಗೆ ಹೆದರಿಕೆ ಉಂಟಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ಬುಧವಾರ ತುಮಕೂರಿನ ಬಿಎಚ್ ರಸ್ತೆಯ ರೋಡ್ ಶೋ ವೇಳೆ ಈ ಘಟನೆ ನಡೆದಿದೆ. ಅಭಿಮಾನಿ ಹಾರ ಎಸೆದ ದೃಶ್ಯವನ್ನು ಆತನ ಹಿಂದುಗಡೆಯಿದ್ದ ವ್ಯಕ್ತಿಯೊಬ್ಬರು ತನ್ನ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಾಹುಲ್ ಗಾಂಧಿಯವರು ವಾಹನದ ಮೇಲೇರಿ ಜನಸಾಮಾನ್ಯರತ್ತ ಕೈ ಬೀಸಿ ಬರುತ್ತಿದ್ದಂತೆಯೇ ರಸ್ತೆಬದಿ ನಿಂತಿದ್ದ ಅಭಿಮಾನಿ ರಾಹಲ್ ಅವರತ್ತ ಹೂವಿನ ಹಾರ ಎಸೆದಿದ್ದಾರೆ. ಈ ಹಾರ ನೇರವಾಗಿ ರಾಹುಲ್ ಅವರ ಕೊರಳಿಗೆ ಬಿದ್ದಿದೆ. ಕೂಡಲೇ ಅವರು ಕೊರಳಿಂದ ಹಾರ ತೆಗೆದು ತನ್ನ ಭದ್ರತಾ ಸಿಬ್ಬಂದಿ ಕೈಗೆ ನೀಡಿದ್ದಾರೆ.

ಭದ್ರತೆಯ ದೃಷ್ಟಿಯಿಂದ ಎಸ್‍ಪಿಜಿ ರಾಹುಲ್ ಗಾಂಧಿಯವರಿಗೆ ಹಾರ ಹಾಕಲು ಗಣ್ಯರಿಗೂ ಅವಕಾಶ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಭಿಮಾನಿ ಕಾರ್ಯಕರ್ತನೋರ್ವ ದೂರದಿಂದಲೇ ರಾಹುಲ್ ಕೊರಳಿಗೆ ಹಾರ ಎಸೆಯುವ ಮೂಲಕ ತನ್ನ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

 

Comments

Leave a Reply

Your email address will not be published. Required fields are marked *