ಗಡಿ ದಾಟಿದ `ಸಾರಥಿ’ – ಸದ್ದಿಲ್ಲದೆ ಅಲ್ಲಿ ಹಬ್ಬಿಸಿದರಲ್ಲ ಕನ್ನಡದ ಕೀರ್ತಿ!

ಬೆಂಗಳೂರು: ಚಾಲೆಂಜಿಂಗ್‍ಸ್ಟಾರ್ ಮತ್ತೆ ಮತ್ತೆ ಹೊಸ ಹೊಸ ದಾಖಲೆಯನ್ನು ಮಾಡುತ್ತಲೇ ಇದ್ದಾರೆ. ಒಂದು ಮುಗಿಯಿತು ಎಂದಾಕ್ಷಣ ಇನ್ನೊಂದು ಬಾವುಟ ಹಾರಿಸುತ್ತಾರೆ. ಹೀಗೆ ಒಂದೊಂದು ಸಾಹಸಕ್ಕೆ ದರ್ಶನ್ ವೃತ್ತಿ ಬದುಕು ಸಾಕ್ಷಿಯಾಗಿದೆ.

ವರ್ಷಕ್ಕೆ ಒಂದೇ ಒಂದು ಸಿನಿಮಾ ಮಾಡಿದರೂ ಅದರಿಂದಲೇ ಅಭಿಮಾನಿಗಳನ್ನು ಹಿಡಿದಿಟ್ಟುಕೊಳ್ಳುತ್ತಾರೆ. ದರ್ಶನ್ ಅಂದರೆ ಸಾಕು ಅಭಿಮಾನಿಗಳು ಎದೆ ಉಬ್ಬಿಸುತ್ತಾರೆ. ಅವರ ಒಂದು ಸಿನಿಮಾ ರಿಲೀಸ್ ಆಗುತ್ತದೆ ಅಂದರೆ ಸಾಕು ಒಂದು ತಿಂಗಳ ಮುಂಚೆಯೇ ದಚ್ಚು ಅಭಿಮಾನಿ ಸಂಘಗಳು ಹಬ್ಬ ಮಾಡಲು ಸಜ್ಜಾಗುತ್ತವೆ. ಕಟೌಟು, ಹೂವಿನ ಹಾರ, ಹಾಲಿನ ಅಭಿಷೇಕ, ಅನ್ನ ಸಂತರ್ಪಣೆ ಮಾಡಿಕೊಳ್ಳುತ್ತಾರೆ.

ಕನ್ನಡ ಚಿತ್ರಗಳು ಈಗ ಬರೀ ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ವಿದೇಶದಲ್ಲಿ ತೆರೆ ಕಾಣುವುದರಿಂದ ಹಿಡಿದು ಪರಭಾಷೆಗೆ ಡಬ್ ಆಗುವವರೆಗೆ ನಮ್ಮ ಚಿತ್ರರಂಗ ಬೆಳೆದಿದೆ. ಕನ್ನಡದ ಟಾಪ್ ಸ್ಟಾರ್ ಗಳ ಎಲ್ಲಾ ಸಿನಿಮಾಗಳು ಹಿಂದಿ ಭಾಷೆಗೆ ಡಬ್ ಆಗುತ್ತವೆ. ಅಲ್ಲಿಯ ಖಾಸಗಿ ವಾಹಿನಿಗಳಲ್ಲಿ ಪ್ರಸಾರವಾಗುತ್ತವೆ. ಕೆಲವೇ ತಿಂಗಳಲ್ಲಿ ಎರಡು ಮೂರು ಬಾರಿ ಟೆಲಿಕಾಸ್ಟ್ ಆಗುವ ಈ ಸಿನಿಮಾಗಳು ಭರ್ತಿ ಲಾಭ ಕೂಡ ತಂದು ಕೊಡುತ್ತವೆ. ಸುದೀಪ್, ಪುನೀತ್, ಯಶ್, ಉಪೇಂದ್ರ ಸೇರಿದಂತೆ ಎಲ್ಲರ ಸಿನಿಮಾಗಳಿಗೆ ಅಲ್ಲಿ ಬೇಡಿಕೆ ಇದೆ.

ವರ್ಷಗಳ ಹಿಂದೆ ವಿರಾಟ್ ಸಿನಿಮಾ ರಿಲೀಸ್ ಆಗಿತ್ತು. ಈಗ ಅದೇ ಸಿನಿಮಾ ಹಿಂದಿಗೆ ಡಬ್ ಆಗಿದೆ. ಖಾಸಗಿ ವಾಹಿನಿಗಳಲ್ಲಿ ಪ್ರಸಾರ ಕಂಡಿದೆ. ಅದಕ್ಕಿಂತ ಹೆಚ್ಚಾಗಿ ಹೊಸ ದಾಖಲೆಯನ್ನು ಯುಟ್ಯೂಬ್‍ ನಲ್ಲಿ ಬರೆದಿದೆ. ಕೆಲವೇ ದಿನಗಳಲ್ಲಿ ವಿರಾಟ್‍ನ ಹಿಂದಿ ಡಬ್ಬಿಂಗ್ ಸಿನಿಮಾವನ್ನು ಎಂಬತ್ತು ಲಕ್ಷಕ್ಕೂ ಹೆಚ್ಚು ಜನ ನೋಡಿದ್ದಾರೆ.

ದರ್ಶನ್ ವೃತ್ತಿ ಬದುಕಿನಲ್ಲಿ ಇದು ಹೊಸ ಇತಿಹಾಸ. ಕನ್ನಡದ ನಾಯಕನ ಚಿತ್ರವೊಂದು ಇಷ್ಟೊಂದು ಸಂಖ್ಯೆಯಲ್ಲಿ ವೀಕ್ಷಣೆಗೆ ಒಳಗಾಗಿದ್ದು ಇದೇ ಮೊದಲಲ್ಲ. ಆದರೆ ಕೆಲವೇ ದಿನಗಳಲ್ಲಿ ಇಷ್ಟೊಂದು ಜನರು ನೋಡಿದ್ದಾರೆ. ಈ ಹಿಂದೆ ಇದೇ ದಚ್ಚು ಅಭಿನಯದ ಜಗ್ಗುದಾದಾ, ಐರಾವತ, ತಾರಕ್ ಸೇರಿದಂತೆ ಬಹುತೇಕ ಸಿನಿಮಾಗಳನ್ನು ಯೂ ಟ್ಯೂಬ್‍ನಲ್ಲಿ ಲಕ್ಷಕ್ಕೂ ಅಧಿಕ ಜನ ನೋಡಿದ್ದರು. ಆ ಸಾಲಿಗೆ ಈಗ ವಿರಾಟ್ ಕೂಡ ಸೇರಿದೆ.

Comments

Leave a Reply

Your email address will not be published. Required fields are marked *