ತಂಗಿ ಮೇಲೆ ಅತ್ಯಾಚಾರವಾಗ್ತಿದ್ದಾಗ ಕಾಪಾಡದೇ ವಿಡಿಯೋ ಮಾಡಿದ ನೀಚ ಸಹೋದರ!

ಲಕ್ನೋ: ತನ್ನ ಸಹೋದರ ಸಂಬಂಧಿ ಬಾಲಕಿಯ ಮೇಲೆ ಅತ್ಯಾಚಾರವಾಗುತ್ತಿದ್ದಾಗ ಆಕೆಯನ್ನು ರಕ್ಷಿಸುವ ಬದಲು ಸಹೋದರನೊಬ್ಬ ಅದನ್ನು ವಿಡಿಯೋ ಮಾಡಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಸಹರಾನ್‍ಪುರ್ ಜಿಲ್ಲೆಯಲ್ಲಿ ನಡೆದಿದೆ.

ಸಹರಾನ್‍ಪುರ್ ಜಿಲ್ಲೆಯ ಕುಶಲ್‍ಪುರ್ ಗ್ರಾಮದಲ್ಲಿ ಈ ಕೃತ್ಯ ನಡೆದಿದ್ದು, ಅಪ್ರಾಪ್ತೆ ಮೇಕೆಗಳಿಗೆ ಮೇವು ತರಲು ಹೋಗಿದ್ದಳು. ಈ ವೇಳೆ ಪಕ್ಕದ ಗ್ರಾಮದ ಕಾಮುಕನೊಬ್ಬ, ಮಹಿಳೆಯೊಬ್ಬಳ ಸಹಾಯದೊಂದಿಗೆ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಆತಂಕಕಾರಿ ವಿಷಯವೆಂದರೆ ಸಂತ್ರಸ್ತೆ ಮೇಲೆ ಅತ್ಯಾಚಾರ ಎಸಗುತ್ತಿದ್ದ ಸಂದರ್ಭದಲ್ಲಿ, ಸಂಬಂಧದಲ್ಲಿ ಆಕೆಗೆ ಸಹೋದರನಾಗಬೇಕಿದ್ದ ವ್ಯಕ್ತಿಯೊಬ್ಬ ಸ್ಥಳಕ್ಕೆ ಬಂದಿದ್ದಾನೆ. ಆದ್ರೆ ಆತ ಕಾಮುಕನ ಕೈಯಿಂದ ಸಂತ್ರಸ್ತೆಯನ್ನು ರಕ್ಷಣೆ ಮಾಡುವುದನ್ನು ಬಿಟ್ಟು ನೀಚ ಕೃತ್ಯವನ್ನು ತನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಾನೆ.

ಸಂತ್ರಸ್ತೆ ಮನೆಗೆ ಬಂದ ನಂತರ ನಡೆದ ಘಟನೆ ಬಗ್ಗೆ ಪೋಷಕರಿಗೆ ವಿವರಿಸಿದ್ದಾಳೆ. ಕೂಡಲೇ ಪೋಷಕರು ಮೀರ್ಜಾಪುರ್ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದು, ಈಗಾಗಲೇ ಆಕೆಯ ಸಂಬಂಧಿಯನ್ನು ಬಂಧಿಸಲಾಗಿದೆ. ಆದರೆ ಸಂತ್ರಸ್ತೆ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿ ತಲೆಮರೆಸಿಕೊಂಡಿದ್ದು, ಅವನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Comments

Leave a Reply

Your email address will not be published. Required fields are marked *