ಚೆಂಡು ವಿರೂಪಗೊಳಿಸಿದ್ದಕ್ಕೆ ಸ್ಮಿತ್, ವಾರ್ನರ್ ಗೆ ಒಂದು ವರ್ಷ ನಿಷೇಧ?

ಕೇಪ್‍ಟೌನ್: ಇಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಸಿಲುಕಿದ ಆಸೀಸ್ ನಾಯಕ ಸ್ಮಿತ್, ಉಪನಾಯಕ ವಾರ್ನರ್ ರನ್ನು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಒಂದು ವರ್ಷ ನಿಷೇಧ ಗೊಳಿಸುವ ಸಾಧ್ಯತೆ ಇದೆ ಎಂದು ಆಸೀಸ್ ಮಾಧ್ಯಮಗಳು ವರದಿ ಮಾಡಿದೆ.

ಆಸೀಸ್ ಆಟಗಾರರ ಕೃತ್ಯದ ಕುರಿತು ಕಟು ಟೀಕೆ ವ್ಯಕ್ತಪಡಿಸಿರುವ ಮಾಧ್ಯಮಗಳು, ತಂಡದ ಕೋಚ್ ಡ್ಯಾರೆನ್ ಲೆಹ್ಮನ್ ಅವರು ಸಹ ತಮ್ಮ ಸ್ಥಾನ ತೊರೆಯುವ ಸಾಧ್ಯತೆಯೂ ಇದೆ ಎಂದು ವರದಿ ಮಾಡಿವೆ. 2013 ರಲ್ಲಿ ಆಸ್ಟ್ರೇಲಿಯಾ ತಂಡದ ಕೋಚ್ ಆಗಿ ಲೆಹ್ಮನ್ ಆಯ್ಕೆ ಆಗಿದ್ದರು. ಸದ್ಯ ಆಸೀಸ್ ಆಟಗಾರರ ಕೃತ್ಯದ ಕುರಿತು ದಕ್ಷಿಣ ಆಫ್ರಿಕಾಗೆ ತೆರಳಿರುವ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಆಟಗಾರರ ಮೋಸದಾಟದ ಬಗ್ಗೆ ಆಸೀಸ್ ಮಾಧ್ಯಮಗಳು ಕೆಂಡಕಾರಿದ್ದು, ಸ್ಮಿತ್ ಹಾಗೂ ವಾರ್ನರ್ ಮೇಲೆ ನಿಷೇಧ ವಿಧಿಸಲು ಆಗ್ರಹಿಸಿವೆ. ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ಮೇಲು ಹೆಚ್ಚಿನ ಒತ್ತಡ ವ್ಯಕ್ತವಾಗುತ್ತಿದ್ದು, ತನಿಖೆಯ ಕುರಿತು ಅಭಿಮಾನಿಗಳಿಗೆ ಶೀಘ್ರವೇ ಮಾಹಿತಿ ನೀಡುವುದಾಗಿ ಬೋರ್ಡ್ ಅಧ್ಯಕ್ಷ ಸದರ್ಲ್ಯಾಂಡ್ ತಿಳಿಸಿದ್ದಾರೆ.

ಚೆಂಡು ವಿರೂಪಗೊಳಿಸುವ ಜಾಲ ರೂಪಿಸಿದ್ದ ಆಸೀಸ್ ನಾಯಕ ಸ್ಮಿತ್ ಗೆ ಐಸಿಸಿ ಪಂದ್ಯದ 100% ದಂಡ, ಒಂದು ಪಂದ್ಯದ ನಿಷೇಧ ಹಾಗೂ ಬ್ಯಾಟ್ಸ್ ಮನ್ ಬ್ಯಾನ್ ಕ್ರಾಫ್ಟ್ ಗೆ ಪಂದ್ಯದ 75% ದಂಡ, 3 ಡಿಮೆರಿಟ್ ಅಂಕಗಳನ್ನು ನೀಡಿದೆ. ಅಲ್ಲದೇ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಸ್ಮಿತ್ ಹಾಗೂ ಉಪನಾಯಕ ವಾರ್ನರ್ ಅವರ ಸ್ಥಾನವನ್ನು ತಲೆ ದಂಡ ಮಾಡಿದೆ. ಇದರೊಂದಿಗೆ ಸ್ಮಿತ್ ಐಪಿಎಲ್ ನ ರಾಜಸ್ಥಾನ ರಾಯಲ್ಸ್ ತಂಡದ ನಾಯಕತ್ವವನ್ನು ಕಳೆದುಕೊಂಡಿದ್ದಾರೆ. ಸದ್ಯ ಆರ್ ಆರ್ ನಾಯಕತ್ವವನ್ನು ಟೀಂ ಇಂಡಿಯಾದ ಬ್ಯಾಟ್ಸ್ ಮನ್ ರಹಾನೆ ಪಡೆದಿದ್ದಾರೆ. ಇದನ್ನೂ ಓದಿ: ರಾಜಸ್ಥಾನ ರಾಯಲ್ಸ್ ನಾಯಕತ್ವ ಸ್ಥಾನದಿಂದ ಸ್ಮಿತ್ ಔಟ್ – ರಹಾನೆಗೆ ಪಟ್ಟ

ನಡೆದಿದ್ದು ಏನು?
ಆಸೀಸ್ ಆರಂಭಿಕ ಆಟಗಾರ ಕ್ಯಾಮರಾನ್ ಬ್ಯಾನ್ ಕ್ರಾಪ್ಟ್ ಕೇಪ್ ಟೌನ್ ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟೆಸ್ಟ್ ಪಂದ್ಯದ 3ನೇ ದಿನದ ವೇಳೆ ಚೆಂಡನ್ನ ವಿರೂಪಗೊಳಿಸಿದ್ದರು. ಈ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ದಿನದಾಟದ ಬಳಿಕ ಮಾತನಾಡಿದ ಆಸೀಸ್ ನಾಯಕ ಸ್ಮಿತ್ ಹಾಗೂ ಬ್ಯಾನ್‍ಕ್ರಾಫ್ಟ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರು.  ಇದನ್ನೂ ಓದಿ: ಚೆಂಡು ವಿರೂಪಗೊಳಿಸಿದ ಪ್ರಕರಣ: ಐಸಿಸಿ ನೀತಿ ವಿರುದ್ಧ ಹರ್ಭಜನ್ ಕಿಡಿ

Comments

Leave a Reply

Your email address will not be published. Required fields are marked *