ಚಾಮುಂಡೇಶ್ವರಿಯಲ್ಲಿ ಸ್ಫರ್ಧಿಸಿ ಸಿಎಂರನ್ನು ಸೋಲಿಸುತ್ತೇನೆ – ಸಿದ್ದರಾಮಯ್ಯಗೆ ಸಿಟಿ ರವಿ ಸವಾಲ್

ಮೈಸೂರು: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸಿಎಂ ಎದುರಿಸಲು ನಾನು ಸಿದ್ಧ. ಪಕ್ಷ ಅವಕಾಶ ನೀಡಿದ್ರೆ ಚಾಮುಂಡೇಶ್ವರಿಯಲ್ಲಿ ಸ್ಪರ್ಧಿಸಿ ಸಿಎಂ ಸಿದ್ದರಾಮಯ್ಯರನ್ನು ಸೋಲಿಸುತ್ತೇನೆ ಎಂದು ಮಾಜಿ ಸಚಿವ ಬಿಜೆಪಿ ಶಾಸಕ ಸಿ.ಟಿ. ರವಿ ಹೇಳಿದ್ದಾರೆ.

ಸಿಎಂ ಅವರು ಚಿಕ್ಕಮಗಳೂರಿಗೆ ಸಿಎಂ ಬಂದಿದ್ದ ಸಂದರ್ಭದಲ್ಲಿ ನನ್ನ ಹೆಸರು ಸಿಟಿ ರವಿ ಅಲ್ಲ, ಲೂಟಿ ರವಿ ಎಂದು ಆರೋಪ ಮಾಡಿದ್ರು. ಯಾರು ಲೂಟಿ ಹೊಡೆದಿದ್ದಾರೆಂದು ಸಾಬೀತುಪಡಿಸಲು ಮಾ.26 ರಂದು ಚಾಮುಂಡಿ ಬೆಟ್ಟಕ್ಕೆ ಬರುವುದಾಗಿ ಸವಾಲು ಹಾಕಿದ್ದೆ. ಅದರಂತೆ ಇಂದು ಚಾಮುಂಡಿ ಬೆಟ್ಟಕ್ಕೆ ಬಂದು ತಾಯಿಗೆ ಪೂಜೆ ಮಾಡಿದ್ದೇನೆ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ನಾನೇ ಸ್ಪರ್ಧಿಸುತ್ತೇನೆ. ನನ್ನ ಸವಾಲನ್ನು ಅವರು ಸ್ವೀಕರಿಸಲಿ ಎಂದು ಸಿಎಂಗೆ ಬಹಿರಂಗ ಸವಾಲೆಸೆದ್ರು.

ಚಾಮುಂಡಿ ಆಣೆಗೆ ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ. ಕಾಂಗ್ರೆಸ್ ಹೈಕಮಾಂಡ್ ನ ಎಲ್ಲರೂ ಈಗ ಚುನಾವಣೆಗಾಗಿ ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದಾರೆ. ಚುನಾವಣೆ ಮುಗಿಯಲಿ. ಕಾಂಗ್ರೆಸ್‍ನವರೇ ಸಿಎಂ ಸಿದ್ದರಾಮಯ್ಯ ಮೇಲೆ ಚಪ್ಪಡಿ ಕಲ್ಲು ಎತ್ತಾಕುತ್ತಾರೆ. ಇದು ಸಿದ್ದರಾಮಯ್ಯನವರಿಗೆ ಗೊತ್ತಾಗಬೇಕು ಎಂದು ವಾಗ್ದಾಳಿ ನಡೆಸಿದರು.

ರಾಹುಲ್ ಗಾಂಧಿ ಬಿಜೆಪಿ ಅವರು ಭ್ರಷ್ಟರು ಅಂತ ಭಾಷಣ ಮಾಡ್ತಾರೆ. ಹೆರಾಲ್ಡ್ ಹಗರಣದಲ್ಲಿ ಅವರು ಜಾಮೀನಿನಲ್ಲಿದ್ದಾರೆ. ಜಾಮೀನು ರದ್ದಾದರೆ, ಜೈಲಿಗೆ ಹೋಗ್ತಾರೆ. ಅಂತವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತೆ ಎಂದು ರಾಹುಲ್ ಗಾಂಧಿ ಹೇಳುತ್ತಾರೆ. ಮೈತ್ರಿ ರಾಜಕಾರಣ ಮಾಡುವವರು ಯಾರೆಂದು ಜನರಿಗೆ ಗೊತ್ತು. ಬಿಬಿಎಂಪಿ ಚುನಾವಣೆಯಲ್ಲಿ ನಂಜನಗೂಡು- ಗುಂಡ್ಲುಪೇಟೆ ಯಲ್ಲಿ ಮೈತ್ರಿ ರಾಜಕಾರಣ ಮಾಡಿದವರು ಯಾರು ಎಂದು ಅವರು ಪ್ರಶ್ನಿಸಿದರು.

ಕೋಮುವಾದ ರಾಜಕಾರಣ ಮಾಡುತ್ತಿರುವುದು ಕಾಂಗ್ರೆಸ್. ಕಿತ್ತೂರು ರಾಣಿಯನ್ನು ಕೊಂದವರನ್ನು ವೈಭವಿಕರಿಸದವರು ಯಾರು? ಮೈಸೂರು ರಾಜಮನೆತನದವರನ್ನು ಅಪಮಾನ ಮಾಡಿದವರು ಯಾರು? ಶಾದಿ ಭಾಗ್ಯ ಒಂದೇ ವರ್ಗಕ್ಕೆ ಸೀಮೀತಗೊಳಿಸಿದವರು ಯಾರು ಎಂದು ಸಿಎಂ ಅವರನ್ನು ಪ್ರಶ್ನಿಸಿದರು.

Comments

Leave a Reply

Your email address will not be published. Required fields are marked *