ಕಡಲ ತೀರದಲ್ಲಿ 100ಕ್ಕೂ ಹೆಚ್ಚು ತಿಮಿಂಗಿಲಗಳ ಮಾರಣಹೋಮ

ಕ್ಯಾನ್ಬೆರಾ: 150ಕ್ಕೂ ಅಧಿಕ ತಿಮಿಂಗಿಲಗಳು ಕಡಲತೀರಕ್ಕೆ ಬಂದು ಬಿದ್ದಿರುವ ಘಟನೆ ಪಶ್ಚಿಮ ಆಸ್ಟ್ರೇಲಿಯಾದ ಹಮೆಲಿನ್ ಬೇ ನಲ್ಲಿ ನಡೆದಿದೆ. ಸಮುದ್ರ ತೀರದಲ್ಲಿರುವ ತಿಮಿಂಗಿಲಗಳಲ್ಲಿ ಕೇವಲ 15 ತಿಮಿಂಗಿಲಗಳು ಮಾತ್ರ ಬದುಕುಳಿದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇವು ಶಾರ್ಟ್ ಫಿನ್ನ್ಡ್ ಪೈಲಟ್ ವೇಲ್ ಜಾತಿಗೆ ಸೇರಿದ ತಿಮಿಂಗಿಲಗಳು ಎಂದು ಗುರುತಿಸಲಾಗಿದೆ. ಕಡಲ ತೀರದಲ್ಲಿ ತಿಮಿಂಗಿಲಗಳು ಬಿದ್ದಿರುವುದನ್ನ ಶುಕ್ರವಾರ ಬೆಳಗ್ಗೆ ಇಲ್ಲಿನ ಮೀನುಗಾರರೊಬ್ಬರು ನೋಡಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ.

ಶುಕ್ರವಾರದ ಮಧ್ಯಾಹ್ನದ ಹೊತ್ತಿಗೆ 15 ತಿಮಿಂಗಿಲಗಳನ್ನು ರಕ್ಷಿಸಲಾಗಿದೆ. ರಕ್ಷಣಾ ಕಾರ್ಯ ಮುಂದುವರಿಸಿದ್ದು, ಬದುಕುಳಿದ ತಿಮಿಂಗಿಲಗಳಿಗೆ ಆರೈಕೆ ಮಾಡಿ ಪುನಃ ಕಡಲಿಗೆ ಬಿಡಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಇದು ನಿಜಕ್ಕೂ ನಂಬಲಾಗದ ವಿಷಯ, ಈ ರೀತಿ ಆಗಿರುವುದನ್ನ ಹಿಂದೆಂದೂ ನೋಡಿಲ್ಲ. ಇಷ್ಟೊಂದು ಸಂಖ್ಯೆಯ ತಿಮಿಂಗಿಲಗಳು ಸಮುದ್ರ ತೀರಕ್ಕೆ ಬಂದು ಬಿದ್ದಿರೋದನ್ನ ಎಂದೂ ಕಂಡಿರಲಿಲ್ಲ” ಎಂದು ಸ್ಥಳಕ್ಕೆ ಭೇಟಿ ನೀಡಿದ ಪ್ರವಾಸಿಗ ಬ್ಯಾರಿ ಬ್ರಿಕೆಲ್ ಹೇಳಿದ್ದಾರೆ.

ದುರದೃಷ್ಟಕರ ಸಂಗತಿಯೆಂದರೆ ಸುಮಾರು ತಿಮಿಂಗಿಲಗಳು ಕಳೆದ ರಾತ್ರಿಯೇ ಕಡಲ ತೀರದ ಒಣ ಪ್ರದೇಶಗಳಿಗೆ ಬಂದು ಸಾವನ್ನಪ್ಪಿವೆ ಎಂದು ರಕ್ಷಣಾ ತಂಡದ ಮುಖ್ಯಸ್ಥ ಜೆರೆಮಿ ಚಿಕ್ ತಿಳಿಸಿದ್ದಾರೆ. ಹವಾಮಾನ ವೈಪರಿತ್ಯದ ಕಾರಣ ರಕ್ಷಣಾಕಾರ್ಯಕ್ಕೆ ಅಡ್ಡಿಯಾಗುತ್ತಿದೆ. ತಿಮಿಂಗಿಲಗಳನ್ನು ಕಡಲಿಗೆ ಬಿಡುವ ಮುಂಚೆ ನಾವು ಎಲ್ಲರ ಸುರಕ್ಷತೆ ಕಡೆಗೆ ಗಮನ ಕೊಡಬೇಕು ಎಂದು ಹೇಳಿದ್ದಾರೆ.

ಉದ್ಯಾನ ಮತ್ತು ವನ್ಯಜೀವಿ ಸೇವಾ ಅಧಿಕಾರಿಗಳು ತಿಮಿಂಗಿಲಗಳ ಮೃತದೇಹಗಳನ್ನು ಕಡಲ ತೀರದಿಂದ ಹೊರತೆಗೆದಿದ್ದಾರೆ ಮತ್ತು ತಿಮಿಂಗಿಲಗಳು ಕಡಲ ತೀರಕ್ಕೆ ಬಂದು ಬಿದ್ದಿರುವುದಕ್ಕೆ ಕಾರಣವೇನೆಂದು ತಿಳಿಯಲು ಅದರ ಡಿಎನ್‍ಎ ಮಾದರಿಯನ್ನು ಸಂಗ್ರಹಿಸಿದ್ದಾರೆ.

2009ರಲ್ಲಿ ಇದೇ ಹಮೆಲಿನ್ ಬೇ ಪ್ರದೇಶದಲ್ಲಿ 80ಕ್ಕೂ ಅಧಿಕ ತಿಮಿಂಗಿಲಗಳು ಹಾಗು ಡಾಲ್ಫಿನ್‍ಗಳು ಕಡಲ ತೀರದಲ್ಲಿ ಸಾವನಪ್ಪಿದ್ದವು ಮತ್ತು 1996ರಲ್ಲಿ 320ಕ್ಕೂ ಅಧಿಕ ಲಾಂಗ್ ಫಿನ್ನ್ಡ್ ತಿಮಿಂಗಿಲಗಳು ಕಡಲ ತೀರದಲ್ಲಿ ಬಂದು ಬಿದ್ದಿದ್ದವು ಎಂದು ವರದಿಗಳು ಹೇಳುತ್ತವೆ.

Comments

Leave a Reply

Your email address will not be published. Required fields are marked *