ಮದುವೆಯ ಹಿಂದಿನ ದಿನವೇ ಮಗಳನ್ನ ಕೊಂದ ತಂದೆ!

ತಿರುವನಂತಪುರಂ: 22 ವರ್ಷದ ಮಗಳನ್ನು ತಂದೆಯೇ ಹತ್ಯೆ ಮಾಡಿದ ಘಟನೆ ಗುರುವಾರ ಕೇರಳದ ಅರೆಕೋಡ್ ಜಿಲ್ಲೆಯಲ್ಲಿ ನಡೆದಿದೆ.

ಅತಿರಾ(22) ಕೊಲೆಯಾದ ದುರ್ದೈವಿ. ಈಕೆ ಪಾತನಾಪುರಂನ ಪೋವತಿಂಗಲ್ ನಿವಾಸಿಯಾಗಿದ್ದು, ಆರೋಪಿ ತಂದೆ ರಜನ್‍ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಅತಿರಾಳ ಇಂದು(ಶುಕ್ರವಾರ) ಆರ್ಮಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ತನ್ನ ಪ್ರಿಯಕರನ ಜೊತೆ ಸಾಲಿಗ್ರಾಮ ದೇವಸ್ಥಾನದಲ್ಲಿ ಮದುವೆ ಆಗಬೇಕಿತ್ತು. ಆದರೆ ಮದುವೆಯ ಹಿಂದಿನ ದಿನವೇ ತಂದೆ ತನ್ನ ಮಗಳನ್ನು ಕೊಲೆ ಮಾಡಿದ್ದಾನೆ.

ಪೊಲೀಸರ ಪ್ರಕಾರ ಅತಿರಾ ಕೋಯಿಲಂದಿ ಗ್ರಾಮದ ಯುವಕನನ್ನು ಪ್ರೀತಿಸುತ್ತಿದ್ದಳು. ಆದರೆ ಆಕೆಯ ತಂದೆ ಇವರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು. ನಂತರ ಅತಿರಾ ಒತ್ತಡ ಹೇರುತ್ತಿದ್ದರಿಂದ ತಂದೆ ಮದುವೆಗೆ ಒಪ್ಪಿಕೊಂಡಿದ್ದರು. ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಶುಕ್ರವಾರದಂದು ಮದುವೆ ನಿಗದಿಯಾಗಿತ್ತು.

ಆದ್ರೆ ಗುರುವಾರ ಮಧ್ಯಾಹ್ನ ಅತಿರಾ ಹಾಗೂ ತಂದೆ ರಜನ್ ನಡುವೆ ಮದುವೆ ವಿಚಾರವಾಗಿ ಜಗಳವಾಗಿ ವಾಗ್ವಾದ ನಡೆಸಿದ್ದರು. ನಂತರ ಅತಿರಾ ಆಶ್ರಯಕ್ಕಾಗಿ ಪಕ್ಕದ ಮನೆಗೆ ಓಡಿಹೋಗಿದ್ದಳು. ಅತಿರಾ ಹಿಂದೆಯೇ ತಂದೆ ರಜನ್ ಹೋಗಿದ್ದು, ಆಕೆಯನ್ನು ಧರಧರನೆ ಎಳೆತಂದು ಚಾಕುವಿನಿಂದ ಇರಿದ್ದಿದ್ದಾನೆ. ಕೂಡಲೇ ಅತಿರಾಳನ್ನು ಮೆಡಿಕಲ್ ಕಾಲೇಜಿಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋಗುವಷ್ಟರಲ್ಲಿ ಆಕೆ ಸಾವನ್ನಪ್ಪಿದ್ದಳು ಎಂದು ವರದಿಯಾಗಿದೆ.

ರಜನ್ ಡ್ರೈವರ್ ಕೆಲಸ ಮಾಡುತ್ತಿದ್ದು, ತನ್ನ ಮಗಳನ್ನು ಕೊಲೆ ಮಾಡುವಾಗ ಮದ್ಯದ ನಶೆಯಲ್ಲಿದ್ದನು. ಈ ಹಿಂದೆ ರಜನ್ ತನ್ನ ಮಗಳಿಗೆ ಆತನನ್ನು ಪ್ರೀತಿಸುವುದನ್ನು ನಿಲ್ಲಿಸು ಎಂದು ಹೇಳಿದ್ದನು. ಆದರೆ ಅತಿರಾ ಕೇಳಿರಲಿಲ್ಲ. ಈ ಕೊಲೆ ಮೊದಲೇ ಪ್ಲಾನ್ ಆಗಿರಲಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಸರ್ಕಲ್ ಇನ್ಸ್ ಪೆಕ್ಟರ್ ಮಂಜೇರಿ ಶೈಜು ತಿಳಿಸಿದ್ದಾರೆ.

ಪ್ರೀತಿ ಶುರುವಾಗಿದ್ದು ಹೀಗೆ: ಅತಿರಾಳ ಪ್ರಿಯಕರನ ತಾಯಿ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರು. ಆಗ ಅವರಿಗೆ ಚಿಕಿತ್ಸೆ ಕೊಡಿಸಬೇಕೆಂದು ಆಸ್ಪತ್ರೆಗೆ ಹೋಗಿದ್ದ. ಅಲ್ಲಿ ಲ್ಯಾಬ್ ಟೇಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಅತಿರಾಳನ್ನು ನೋಡಿ ಇಷ್ಟಪಟ್ಟಿದ್ದ. ನಂತರ ಆಕೆಗೆ ತನ್ನ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದು, ಇಬ್ಬರ ಕುಟುಂಬದವರು ಸಿಂಪಲ್ ಆಗಿ ಮದುವೆ ಮಾಡಲು ನಿರ್ಧರಿಸಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯುವತಿಯ ಪ್ರಿಯಕರ ಎಸ್‍ಸಿ ಸಮುದಾಯಕ್ಕೆ ಸೇರಿದ್ದರಿಂದ ರಜನ್ ಈ ಮದುವೆಯನ್ನು ನಿರಾಕರಿಸಿದ್ದನು. ಇದು ಮರ್ಯಾದಾ ಹತ್ಯೆಯಾ ಎಂಬುದು ವಿಚಾರಣೆ ನಂತರ ತಿಳಿದು ಬರಲಿದೆ ಎಂದು ಸರ್ಕಲ್ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *