ಎದೆ ಭಾಗಕ್ಕೆ ಗನ್‍ನಿಂದ ಶೂಟ್ ಮಾಡಿಕೊಂಡು ನಿವೃತ್ತ ಯೋಧ ಆತ್ಮಹತ್ಯೆ!

ಧಾರವಾಡ: ನಿವೃತ್ತ ಯೋಧರೊಬ್ಬರು ಗನ್‍ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡದಲ್ಲಿ ನಡೆದಿದೆ.

ನಗರದ ಮೋರೆ ಪ್ಲಾಟ್‍ನ ಚನ್ನಮಲ್ಲಯ್ಯ(43) ಹಿರೇಮಠ ಗನ್‍ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ನಿವೃತ್ತ ಯೋಧ. ಇವರು ಕಳೆದ ಎರಡು ದಿನಗಳಿಂದ ಮಾನಸಿಕ ಖಿನ್ನತೆಯಾದವರಂತೆ ವರ್ತಿಸುತ್ತಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ. ಸಂಜೆ ಮನೆಯಲ್ಲಿದ್ದ ಡಬಲ್ ಬ್ಯಾರಲ್ ಗನ್ ತೆಗೆದುಕೊಂಡು ಅದರಲ್ಲಿ ಗುಂಡು ಹಾಕಿ ಎದೆ ಭಾಗಕ್ಕೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಘಟನೆ ನಡೆದ ವೇಳೆ ಪತ್ನಿ ಹಾಗೂ ಅವರ ಮಕ್ಕಳು ಮನೆಯಲ್ಲೇ ಇದ್ದರು ಎಂದು ತಿಳಿದುಬಂದಿದೆ. ಚನ್ನಮಲ್ಲಯ್ಯ ಅವರ ಅಳಿಯ ಗನ್‍ನಿಂದ ಶೂಟ್ ಮಾಡಿಕೊಳ್ಳುವುದನ್ನು ತಪ್ಪಿಸಲು ಪ್ರಯತ್ನ ಮಾಡಿದಾಗ, ಅವರನ್ನ ಹಿಂದಕ್ಕೆ ತಳ್ಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಎರಡು ವರ್ಷಗಳ ಹಿಂದೆಯಷ್ಟೇ ಇವರು ಸೇನೆಯಿಂದ ನಿವೃತ್ತಿ ಹೊಂದಿದ್ದರು. ಸದ್ಯ ಹುಬ್ಬಳ್ಳಿಯ ಬ್ಯಾಂಕ್‍ವೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದರು. ಈ ಬಗ್ಗೆ ಉಪನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *