ಬಳ್ಳಾರಿ, ಚಿಕ್ಕಮಗಳೂರು, ಚಿಕ್ಕೋಡಿಯಲ್ಲಿ ವರುಣನ ಅಬ್ಬರ

ಬಳ್ಳಾರಿ: ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದ ವಿವಿಧೆಡೆ ಸುರಿಯುತ್ತಿರುವ ಮಳೆ ಭಾನುವಾರವೂ ಮುಂದುವರೆದಿತ್ತು.

ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಬಳ್ಳಾರಿ ಜಿಲ್ಲೆಯ ಹಲವು ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಅಲ್ಲದೇ ಭಾರೀ ಮಳೆಯಿಂದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲೂ ಸಹ ಕಳೆದ ರಾತ್ರಿ ಧಾರಕಾರವಾಗಿ ಸುರಿದ ಮಳೆಗೆ ಮೋರಗೇರಿ ಗ್ರಾಮದ ಹಳ್ಳ ತುಂಬಿ ಹರಿಯುತ್ತಿದೆ. ಅಲ್ಲದೇ ಹಗರಿಬೊಮ್ಮನಹಳ್ಳಿ- ಹಡಗಲಿ ಮಾರ್ಗದ ಸಂಚಾರ ಕೆಲ ಕಾಲ ಸ್ಥಗಿತಗೊಂಡಿತ್ತು.

ಮೋರಗೇರಿ ಗ್ರಾಮದ ಹಲವು ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು ಜನರು ಯುಗಾದಿ ಹಬ್ಬದ ದಿನದಂದು ಮನೆಗೆ ನುಗ್ಗಿದ ನೀರನ್ನು ಹೊರಹಾಕುವಲ್ಲಿ ನಿರತರಾಗಿದ್ದರು. ಒಟ್ಟಾರೆ ಬಿರುಬಿಸಿಲಿನ ಸಮಯದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ ನಿರ್ಮಿಸಿದೆ.

ಭಾರೀ ಮಳೆಯಿಂದಾಗಿ ಕಾಫಿನಾಡಿನ ಮಲೆನಾಡು ಭಾಗ ಅಕ್ಷರಶಃ ತತ್ತರಿಸಿ ಹೋಗಿದೆ. ಬಾಳೆಹೊನ್ನೂರು, ಜೈಪುರ, ಕೊಪ್ಪ, ಶೃಂಗೇರಿ, ಮೂಡಿಗೆರೆಯಲ್ಲಿ ಭಾರೀ ಮಳೆ ಸುರಿದಿರೋದ್ರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮೂಡಿಗೆರೆಯಲ್ಲಿ ಭಾರೀ ಗಾಳಿ-ಮಳೆಯಾಗಿದ್ರಿಂದ ಚಿಕ್ಕಮಗಳೂರು-ಮೂಡಿಗೆರೆಗೆ ಸಂಪರ್ಕ ಕಲ್ಪಿಸೋ ಕಬ್ಬಿಣ ಸೇತುವೆ ಬಳಿಯ ಸೇತುವೆ ಕುಸಿದು ಬಿದ್ದಿದೆ.

ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ಮಳೆ ಆಗಮನ ರೈತರಲ್ಲಿ ಹರ್ಷ ಮೂಡಿಸಿದೆ. ಆದ್ರೆ ಮಾವಿನ ಫಸಲು ನಾಶವಾಗುತ್ತದೇನೋ ಎಂಬ ಚಿಂತೆಯಲ್ಲಿ ಮಾವು ಬೆಳೆಗಾರರು ಕಂಗಾಲಾಗಿದ್ದಾರೆ. ಮಳೆ ಹೀಗೇ ಮುಂದುವರೆದರೆ ಮುಂಗಾರಿನ ಪೂರ್ವದಲ್ಲೇ ಕೃಷಿ ಚಟುವಟಿಕೆಗಳು ಪ್ರಾರಂಭವಾಗುವ ಸಾಧ್ಯತೆ ಇದೆ.

ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದಲ್ಲಿ ನಿರಂತರ ಮಳೆ ಸುರಿದಿದ್ದು, ವರ್ಷದ ಮೊದಲ ಮಳೆಗೆ ಜನರು ಫುಲ್ ಕುಶ್ ಆಗಿದ್ದಾರೆ. ಯುಗಾದಿ ದಿನದಂದೇ ಮಳೆಯಾಗಿರುವುದಕ್ಕೆ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

Comments

Leave a Reply

Your email address will not be published. Required fields are marked *