10 ಅಡಿ ಆಳದ ನೀರಿನ ಟ್ಯಾಂಕೊಳಗೆ ಬಿದ್ದ 1 ತಿಂಗ್ಳ ಆನೆಮರಿಯ ರಕ್ಷಣೆ

ಕೊಯಂಬತ್ತೂರು: ನೀರಿನ ಟ್ಯಾಂಕಿನೊಳಗೆ ಬಿದ್ದ ಮರಿಯಾನೆಯೊಂದನ್ನು ಅರಣ್ಯ ಇಲಾಖೆಯವರು ರಕ್ಷಿಸಿ ಆನೆಗಳ ಹಿಂಡಿನ ಜೊತೆ ಬಿಟ್ಟ ಘಟನೆ ನಡೆದಿದೆ.

ಪೆರಿಯ ತಡಾಗಂನಲ್ಲಿರೋ ಶ್ರೀ ಲಲಿತಾಂಬಿಕ ದೇವಸ್ಥಾನದ ನೀರಿನ ಟ್ಯಾಂಕಿಗೆ ಮರಿಯಾನೆ ಗುರುವಾರ ಸಂಜೆ 4.30ರ ಸುಮಾರಿಗೆ ಬಿದ್ದು, ಒದ್ದಾಡಿದೆ. ಕೂಡಲೇ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ರಕ್ಷಿಸಿದ್ದಾರೆ.

ನೀರು ಕುಡಿಯಲೆಂದು ಆನೆಗಳ ಹಿಂಡು ದೇವಸ್ಥಾನದ ಪಕ್ಕದಲ್ಲಿರುವ 10 ಅಡಿ ಆಳದ ಟ್ಯಾಂಕ್ ಬಳಿ ಬಂದಿವೆ. ಈ ವೇಳೆ ಹಿಂಡಿನಲ್ಲಿದ್ದ 1 ತಿಂಗಳ ಮರಿಯಾನೆಯೊಂದು ಟ್ಯಾಂಕೊಳಗೆ ಬಿದ್ದಿದೆ. ಕೂಡಲೇ ಇದನ್ನು ಗಮನಿಸಿದ ಉಳಿದ ಆನೆಗಳು ಮರಿಯನ್ನು ರಕ್ಷಿಸಲು ಪ್ರಯತ್ನಿಸಿ ವಿಫಲವಾಗಿವೆ.

ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರು ಗಸ್ತು ತಿರುಗುತ್ತಿದ್ದ ವೇಳೆ ಆನೆಗಳ ಹಿಂಡು ನೀರಿನ ಟ್ಯಾಂಕಿನ ಬಳಿ ಇರುವುದನ್ನು ಗಮನಿಸಿದ್ದಾರೆ. ಅಲ್ಲದೇ ಮರಿಯಾನೆಯೊಂದು ಟ್ಯಾಂಕೊಳಗೆ ಬಿದ್ದು, ಒದ್ದಾಡುತ್ತಿರುವುದು ತಿಳಿಯುತ್ತದೆ.

ಕೂಡಲೇ ಎಚ್ಚೆತ್ತಕೊಂಡ ಅರಣ್ಯ ಇಲಾಖೆ, ಮರಿಯಾನೆಯನ್ನು ಕಾಪಾಡುವ ಸಲುವಾಗಿ ಆನೆಗಳ ಹಿಂಡನ್ನು ಅಲ್ಲಿಂದ ಓಡಿಸಲು ಪಟಾಕಿ ಹಚ್ಚಿದ್ದಾರೆ. ಭಯದಿಂದ ಆನೆಗಳು ಅಲ್ಲಿಂದ ತೆರಳಿದ ಬಳಿಕ ಅರ್ಥ್‍ಮೂವರ್ ಬಳಸಿ ಮರಿಯಾನೆಯನ್ನು ಮೇಲಕ್ಕೆತ್ತಿದ್ದಾರೆ. ಇಂದು ಬೆಳಗ್ಗೆ 6 ಗಂಟೆಯ ಸುಮಾರಿಗೆ ರಕ್ಷಿಸಿ ಆನೆಗಳ ಹಿಂಡಿನ ಜೊತೆ ಬಿಡಲಾಯಿತು ಎಂಬುದಾಗಿ ವರದಿಯಾಗಿದೆ.

Comments

Leave a Reply

Your email address will not be published. Required fields are marked *