7ನೇ ಕ್ಲಾಸ್ ಬಾಲಕನನ್ನು ಅಪಹರಿಸಿ ಕಾರಿನೊಳಗೆ ರೇಪ್ ಮಾಡಿದ ಕ್ಯಾಬ್ ಚಾಲಕನಿಗೆ 10 ವರ್ಷ ಜೈಲು

ಮುಂಬೈ: 7ನೇ ತರಗತಿಯ ಹುಡುಗನನ್ನು ಅಪಹರಿಸಿ, ಕಾರಿನೊಳಗೆ ಅತ್ಯಾಚಾರ ಮಾಡಿದ್ದ ಕ್ಯಾಬ್ ಚಾಲಕನಿಗೆ ಇಲ್ಲಿನ ನ್ಯಾಯಾಲಯ ಹತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

ಈ ಘಟನೆ 2013 ರಲ್ಲಿ ಸಾಂಟಾಕ್ರೂಸ್‍ನಲ್ಲಿ ನಡೆದಿದ್ದು, ಅಪರಾಧಿ 30 ವರ್ಷದ ಕ್ಯಾಬ್ ಚಾಲಕನಿಗೆ ಮಂಗಳವಾರ ಸೆಷನ್ಸ್ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

13 ವರ್ಷದ ಸಂತ್ರಸ್ತ ಬಾಲಕ ಮುನ್ಸಿಪಲ್ ಶಾಲೆಯ ವಿದ್ಯಾರ್ಥಿಯಾಗಿದ್ದ ಎಂಬುದು ತಿಳಿದುಬಂದಿದೆ. ಅಪರಾಧಿ ತನ್ನ ಇಂಡಿಗೊ ಕಾರನ್ನು ತೊಳೆಯುವಂತೆ ಸಂತ್ರಸ್ತ ಬಾಲಕ ಮತ್ತು ಅವನ ಗೆಳೆಯನಿಗೆ ಹೇಳಿದ್ದ. ಅದಕ್ಕಾಗಿ 110 ರೂ. ಕೊಡಬೇಕಿತ್ತು. ಆದ್ರೆ ಚಿಲ್ಲರೆ ಇಲ್ಲವಾದ ಕಾರಣ ತನ್ನ ಜೊತೆ ಬರುವಂತೆ ಹೇಳಿ ಬಾಲಕನನ್ನು ಕರೆದುಕೊಂಡು ಹೋಗಿದ್ದ.

ಅಪರಾಧಿ ತನ್ನ ಕಾರಿನಲ್ಲಿ ಬಾಲಕನನ್ನು ಮಿಲಿಟರಿ ಶಿಬಿರದ ಸಮೀಪವಿರುವ ಕಬ್ರಸ್ಟಾನ್ ಕಡೆಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಕಾರನ್ನು ನಿಲ್ಲಿಸಿ ಕಾರಿನ ಕಿಟಕಿಗಳನ್ನು ಮುಚ್ಚಿ ನಂತರ ಬಾಲಕನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಬಗ್ಗೆ ಬಾಲಕ ಪೋಷಕರಿಗೆ ತಿಳಿಸಿದ್ದು, ಬಳಿಕ ಅವರು ವಕೋಲಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.

ಈ ಕೃತ್ಯಕ್ಕೆ ಬಳಸಿದ ಕಾರಿನ ಕುರಿತಾದ ಹಲವಾರು ವಿವರಗಳನ್ನು ನೆನಪಿಸಿಕೊಂಡು ಬಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದ. ಕಾರು ಬೆಳ್ಳಿಯ ಬಣ್ಣ ಮತ್ತು ಹಿಂಭಾಗದಲ್ಲಿ ಸಾಯಿ ಬಾಬಾ ಸ್ಟಿಕರ್ ಅಂಟಿಸಲಾಗಿತ್ತು ಎಂಬ ಮಾಹಿತಿ ನೀಡಿದ್ದ. ಅದರ ಆಧಾರದ ಮೇಲೆ ಪೊಲೀಸರು ಪ್ರಕರಣವನ್ನ ಬೇಧಿಸಿದ್ದರು.

Comments

Leave a Reply

Your email address will not be published. Required fields are marked *