ಇನ್ನು ಮುಂದೆ ನಗರ ಮತ್ತು ಹೈವೇಯಲ್ಲಿ ಕಾರು, ಬೈಕ್‍ಗಳು ಮತ್ತಷ್ಟು ಜಾಸ್ತಿ ವೇಗದಲ್ಲಿ ಹೋಗಬಹುದು!

ನವದೆಹಲಿ: ನಗರ ರಸ್ತೆ ಮತ್ತು ಹೆದ್ದಾರಿಯಲ್ಲಿ ವೇಗದ ಮಿತಿಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಹೊಸ ನಿಯಮದ ಪ್ರಕಾರ ನಗರದಲ್ಲಿ ಕಾರುಗಳು ಗಂಟೆಗೆ 70 ಕಿ.ಮೀ. ವೇಗ ಮತ್ತು ಬೈಕುಗಳಿಗೆ 60 ಕಿ.ಮೀ. ವೇಗದ ಮಿತಿಯನ್ನು ನಿಗದಿ ಪಡಿಸಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮಂತ್ರಿ ನಿತಿನ್ ಗಡ್ಕರಿ ಬುಧವಾರದಂದು ನಗರದ ರಸ್ತೆಗಳು ಮಾತ್ರವಲ್ಲದೇ ಹೆದ್ದಾರಿಗಳು ಮತ್ತು ಎಕ್ಸ್ ಪ್ರೆಸ್ ವೇಗಳಲ್ಲೂ ವೇಗದ ಮಿತಿಯನ್ನು ಹೆಚ್ಚಿಸಲು ಒಪ್ಪಿಗೆ ನೀಡಿದ್ದಾರೆ. ಅಧಿಸೂಚನೆ ಹೊರಡಿಸಲು ಈ ಪ್ರಸ್ತಾವನೆಯನ್ನು ಕಾನೂನು ಸಚಿವಾಲಯಕ್ಕೆ ಈಗ ಕಳುಹಿಸಲಾಗಿದೆ.

ಹೊಸ ವ್ಯವಸ್ಥೆಯ ಪ್ರಕಾರ ಒಂದು ವೇಳೆ ನಿಗದಿಯಾಗಿರುವ ಮಿತಿಯ 5% ರಷ್ಟು ಜಾಸ್ತಿ ವೇಗದಲ್ಲಿ ಸಂಚರಿಸಿದ್ದಲ್ಲಿ ಎಚ್ಚರಿಕೆ ನೀಡಲಾಗುತ್ತದೆ ಅಷ್ಟೇ ಅಲ್ಲದೇ ದಂಡ ವಿಧಿಸಲಾಗುವುದಿಲ್ಲ. ನಗರದಲ್ಲಿ ಗಂಟೆಗೆ 70 ಕಿ.ಮೀ ವೇಗದಲ್ಲಿ ಸಂಚರಿಸುವುದು ಪ್ರಯೋಗಿಕವಾಗಿ ಸಾಧ್ಯವಾಗದೇ ಇದ್ದರೂ ಹಲವು ನಗರಗಳಲ್ಲಿ ರಿಂಗ್ ರಸ್ತೆಗಳು ಇರುವ ಕಾರಣ ವೇಗದ ಮಿತಿಯನ್ನು ಏರಿಸಲಾಗಿದೆ.

ದೇಶಾದ್ಯಂತ ವೇಗ ಮಿತಿಯನ್ನ ಹೆಚ್ಚಿಸುವ ಅಧಿಕಾರ ಕೇವಲ ಕೇಂದ್ರ ಸರ್ಕಾರಕ್ಕೆ ಮಾತ್ರ ಇದ್ದು, ರಾಜ್ಯ ಸರ್ಕಾರ ಮತ್ತು ಇನ್ನಿತರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ರಸ್ತೆಯ ಮೇಲೆ ವೇಗದ ಮಿತಿಯನ್ನು ಹೇರಲು ಅನುಮತಿ ನೀಡಲಾಗಿದೆ. ಆದರೆ ಕೇಂದ್ರ ಸರ್ಕಾರ ನಿಗದಿ ಪಡಿಸಿದ ಗರಿಷ್ಟ ವೇಗದ ಮಿತಿಯನ್ನು ಮೀರುವಂತಿಲ್ಲ.

ಬದಲಾಗಿರುವ ನಿಯಮಗಳ ಪ್ರಕಾರ ಎಕ್ಸ್ ಪ್ರೆಸ್ ವೇನಲ್ಲಿ ಇಲ್ಲಿಯವರೆಗೆ ಪ್ರತಿ ಗಂಟೆಗೆ 100 ಕಿ.ಮೀ ವೇಗದಲ್ಲಿ ಸಂಚರಿಸುತ್ತಿದ್ದ ಕಾರು ಇನ್ನು ಮುಂದೆ ಪ್ರತಿ ಗಂಟೆಗೆ 120 ಕಿ.ಮೀ ವೇಗದಲ್ಲಿ ಸಂಚರಿಸಬಹುದು. ರಾಷ್ಟ್ರೀಯ ಹೆದ್ದಾರಿಯಲ್ಲಿ ಗಂಟೆಗೆ 80 ಕಿ.ಮೀ ವೇಗದಲ್ಲಿ ಹೋಗುತ್ತಿದ್ದ ಕಾರುಗಳು ಗಂಟೆಗೆ 100 ಕಿ.ಮೀ ವೇಗದಲ್ಲಿ ಸಂಚರಿಸಬಹುದಾಗಿದೆ.

Comments

Leave a Reply

Your email address will not be published. Required fields are marked *