ಹಾಸನ: ನೀರು ಕುಡಿಯಲು ಹೋಗಿ ಕೆಸರಿನಲ್ಲಿ ಮುಳುಗಿದ್ದ ಮರಿಯಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಆಲೂರು ತಾಲೂಕಿನ ಮಗ್ಗೆ ಬಳಿ ಆನೆ ಹಿಂಡು ಭಾನುವಾರ ರಾತ್ರಿ ನೀರು ಕುಡಿಯಲು ಬಂದಿತ್ತು. ಕೆರೆಯ ಒಂದು ಭಾಗದಲ್ಲಿ ಮೊದಲೇ ಜೆಸಿಬಿಯಿಂದ ಗುಂಡಿ ತೋಡಿದ್ದರಿಂದ ಅಲ್ಲಿ ಕೆಸರು ತುಂಬಿತ್ತು. ಇದನ್ನು ಅರಿಯದ ಆರೇಳು ವರ್ಷದ ಸಲಗ ನೀರು ಕುಡಿಯುವ ಧಾವಂತದಲ್ಲಿ ಕೆಸರಲ್ಲಿ ಹೂತುಕೊಂಡಿತ್ತು.

ಮುಂಜಾನೆ ಗ್ರಾಮಸ್ಥರು ಇದನ್ನು ನೋಡಿ ಆತಂಕದಿಂದ ಅರಣ್ಯ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದರು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಸಿಬ್ಬಂದಿ ಜೆಸಿಬಿ ಸಹಾಯದಿಂದ ಮರಿಯಾನೆಯನ್ನು ಮೇಲೆತ್ತಿದ್ದಾರೆ. ಈ ವೇಳೆ ಜೀವ ಉಳಿಸಿಕೊಳ್ಳುವ ಭಯದಲ್ಲಿ ವಿಚಲಿತವಾದ ಮರಿಯಾನೆ ತನ್ನನ್ನು ಮೇಲೆತ್ತಿದ ಜೆಸಿಬಿ ಮೇಲೆ ದಾಳಿಗೆ ಮುಂದಾಗಿದ್ದು, ತಕ್ಷಣ ಜೆಸಿಬಿಯಿಂದ ಇಬ್ಬರು ಇಳಿದು ಓಡಿ ಹೋಗಿದ್ದಾರೆ.

ಜನರು ಕೂಗಾಡಿದ್ರಿಂದ ಭಯಗೊಂಡ ಮರಿಯಾನೆ, ಸ್ಥಳದಿಂದ ಕಾಲ್ಕಿತ್ತಿದೆ. ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದ ಇಬ್ಬರು, ನಾಲ್ಕೈದು ಗಂಟೆಗಳ ಕಾಲ ನರಳಾಡಿದ ಮರಿಯಾನೆ ಬದುಕಿತಲ್ಲ ಎಂದು ಸಂತಸಪಟ್ಟಿದ್ದಾರೆ.
https://youtu.be/nvNIIjLKQOs

Leave a Reply