ಅಪ್ರಾಪ್ತೆ ಮನೆಕೆಲಸದಾಕೆ ಮೇಲೆ ಥಳಿತ – ಬಿಬಿಎಂಪಿ ಕಾರ್ಪೊರೇಟರ್ ದಂಪತಿ ವಿರುದ್ಧ ಆರೋಪ

ಬೆಂಗಳೂರು: ಅಪ್ರಾಪ್ತೆ ಕೆಸಲದಾಕೆಗೆ ದೈಹಿಕ ಕಿರುಕುಳ ನೀಡಿರುವ ಆರೋಪ ಬೆಂಗಳೂರಿನ ಮರಿಯಪ್ಪನಪಾಳ್ಯ ವಾರ್ಡ್ ಕಾರ್ಪೊರೇಟರ್ ಎಮ್.ಮಹದೇವ್ ಮತ್ತು ಅವರ ಪತ್ನಿ ಸುಧಾ ಮೇಲೆ ಕೇಳಿ ಬಂದಿದೆ.

ಎರಡು ದಿನಗಳ ಹಿಂದೆ ಕಾರ್ಪೊರೇಟರ್ ಮಹದೇವ್ ಮನೆಯಲ್ಲಿ ಅಪ್ರಾಪ್ತೆ ಬಾಲಕಿ ಕೆಲಸ ಮಾಡುತ್ತಿದ್ದಳು. ಕಾರ್ಪೊರೆಟರ್ ಮನೆಯಲ್ಲಿದ್ದ 5 ಸಾವಿರ ಹಣ ಕದ್ದಿದ್ದಾಳೆ ಅಂತಾ ಆರೋಪಿಸಿ ಕಾರ್ಪೊರೇಟರ್ ಮಹದೇವ್ ಮತ್ತು ಅವರ ಪತ್ನಿ ಸುಧಾ ಇಬ್ಬರು ಅಪ್ರಾಪ್ತ ಕೆಲಸದಾಕೆಗೆ ಹಿಗ್ಗಾಮುಗ್ಗಾ ಥಳಿಸಿ, ಚಿತ್ರಹಿಂಸೆ ನೀಡಿದ್ದಾರೆ. ಬಳಿಕ ಪೊಲೀಸರನ್ನು ಕರೆಸಿ ಧಮ್ಕಿ ಹಾಕಿಸಿದ್ದಾರೆ. ವಿಚಾರಣೆ ನೆಪದಲ್ಲಿ ಪೊಲೀಸರು ಬೂಟು ಕಾಲಿನಿಂದ ಒದ್ದಿದ್ದಾರೆ ಅಂತ ಹಲ್ಲೆಗೊಳಗಾದ ಕೆಲಸದಾಕೆ ಗಂಭೀರ ಆರೋಪ ಮಾಡಿದ್ದಾಳೆ.

ಘಟನೆ ಬಳಿಕ ಬಾಲಕಿಗೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ. ಇತ್ತ ತಮ್ಮ ಮೇಲೆ ಆರೋಪದ ಕುರಿತು ಮಹದೇವ್ ಪ್ರತಿಕ್ರಿಯೆ ನೀಡಿದ್ದು, ಕೆಲಸದಾಕೆ ಸುಳ್ಳು ಆರೋಪ ಮಾಡುತ್ತಿದ್ದು, ಆಕೆ ತಮ್ಮ ಮನೆಯ ಮಗಳಿದ್ದಂತೆ. ಹಲ್ಲೆ ನಡೆಸಿಲ್ಲ ಅಂತ ಸ್ಪಷ್ಟನೆ ನೀಡಿದ್ದಾರೆ. ಈ ವಿಚಾರ ಬೆಳಕಿಗೆ ಬಂದ ಬಳಿಕ ನಂದಿನಿಲೇಔಟ್ ಪೊಲೀಸರು, ಹಲ್ಲೆಗೊಳಗಾದ ಕೆಲಸದಾಕೆಯ ಹೇಳಿಕೆ ಪಡೆಯಲು ಮುಂದಾಗಿದ್ದಾರೆ.

Comments

Leave a Reply

Your email address will not be published. Required fields are marked *