ಹೈದರಾಬಾದ್: ಅಪಾರ್ಟ್‍ಮೆಂಟ್ ನ 8ನೇ ಮಹಡಿಯಿಂದ ಹಾರಿ 10ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ಹೈದರಾಬಾದ್ ನ ಎಲ್‍ಬಿ ನಗರದಲ್ಲಿ ನಡೆದಿದೆ.
ಶ್ರಾವಣಿ, ಭಾರ್ಗವಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳು. ಇಬ್ಬರು ನಗರದ ಪ್ರತಿಷ್ಟಿತ ಅಕ್ಷರ ಅಂತಾರಾಷ್ಟ್ರೀಯ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಶ್ರಾವಣಿ ಅವರ ತಂದೆ ನರೇಂದ್ರ ಅವರು ನಗರದ ಕಂಚನ್ಬಾಗ್ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯ (ಡಿಆರ್ ಡಿಎ)ನಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಭಾರ್ಗವಿ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿಕೊಳ್ಳಲು ಶ್ರಾವಣಿ ವಾಸಿಸುವ ಟಿಎನ್‍ಆರ್ ಅಪಾರ್ಟ್ ಮೆಂಟ್ ಗೆ ತೆರಳಿದ್ದಾಳೆ. ಈ ವೇಳೆ ಮುಂದಿನ ಫೈನಲ್ ಇಂಗ್ಲೀಷ್ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಾರೆ. ಆದರೆ ವಿದ್ಯಾರ್ಥಿನಿಯರ ಪೋಷಕರು ತರಕಾರಿ ತರಲು ಹೊರಹೋಗಿದ್ದ ಸಮಯದಲ್ಲಿ ಸಂಜೆ 6.30 ರ ವೇಳೆಯಲ್ಲಿ ಇಬ್ಬರು ಸೇರಿ ಅಪಾರ್ಟ್‍ಮೆಂಟ್ ನ 8 ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ಥಳೀಯರು ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದು ಸ್ಥಳಕ್ಕೆ ಬಂದ ಪೊಲೀಸರು ಇಬ್ಬರು ವಿದ್ಯಾರ್ಥಿನಿಯರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ಕಳುಹಿಸಿದ್ದಾರೆ. ಆದರೆ ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನು ಎಂಬುದು ತಿಳಿದು ಬಂದಿಲ್ಲ.

Leave a Reply