ಪ್ರೇಯಸಿಯನ್ನ ಕೊಂದು ಮರುದಿನವೇ ಬೇರೆ ಯುವತಿಯ ಜೊತೆ ಹಸೆಮಣೆ ಏರಿದ!

ಹೈದರಾಬಾದ್: ಪ್ರೀತಿಸಿ ಮದುವೆಯಾಗುವೆನೆಂದು ನಂಬಿಸಿದ ಪ್ರಿಯಕರ, ಪ್ರೇಯಸಿಯನ್ನ ಬರ್ಬರವಾಗಿ ಹತ್ಯೆಗೈದು ಮರುದಿನವೇ ಬೇರೆ ಯುವತಿಯ ಜೊತೆ ಹಸೆಮಣೆ ಏರಿದ್ದು, ಆತನನ್ನು ಈಗ ಪೊಲೀಸರು ಬಂಧಿಸಿದ್ದಾರೆ.

ನರೇಶ್ ಬಂಧಿತ ಆರೋಪಿ. ಈತ ಆಂಬುಲೆನ್ಸ್ ಡ್ರೈವರ್ ಆಗಿದ್ದು, ಪ್ರೇಯಸಿಯಾದ ಭಾರ್ಗವಿ ಖಾಸಗಿ ಆಸ್ಪತ್ರೆಯಲ್ಲಿ ರಿಸೆಪ್ಶನಿಸ್ಟ್ ಆಗಿದ್ದರು. ಇಬ್ಬರೂ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದು, ನರೇಶ್ ಭಾರ್ಗವಿಯನ್ನ ಮದುವೆಯಾಗುವುದಾಗಿ ನಂಬಿಸಿದ್ದ. ಆದ್ರೆ ಮನೆಯಲ್ಲಿ ನಿಶ್ಚಯಿಸಿದ ಹುಡುಗಿಯನ್ನ ನರೇಶ್ ಮದುವೆಯಾಗುತ್ತಿದ್ದಾನೆ ಎಂಬ ವಿಷಯ ಪ್ರೇಯಸಿಗೆ ತಿಳಿಯುತ್ತಿದಂತೆ, ಆಕೆಯನ್ನ ತನ್ನ ಜಮೀನಿಗೆ ಕರೆದೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಎರಡು ದಿನಗಳಿಂದ ಮನೆಗೆ ಬಾರದ ಮಗಳನ್ನ ಹುಡುಕಾಡಿದ ಪೋಷಕರು, ಪೊಲೀಸರಿಗೆ ಮಗಳು ನಾಪತ್ತೆಯಾಗಿದ್ದಾಳೆ ಎಂದು ದೂರು ಸಲ್ಲಿಸಿದ್ದರು. ಭಾರ್ಗವಿಯ ಮೊಬೈಲ್ ಕರೆಯ ಆಧಾರದ ಮೇರೆಗೆ ಪ್ರಿಯಕರ ನರೇಶ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ತನ್ನ ಪ್ರಿಯಕರ ಬೇರೊಬ್ಬ ಯುವತಿಯ ಜೊತೆ ವಿವಾಹ ಆಗುತ್ತಿರುವ ವಿಷಯ ತಿಳಿಯುತ್ತಿದಂತೆ ಭಾರ್ಗವಿ ಕಂಗಾಲಾಗಿ ನರೇಶ್ ಜಗಳವಾಡಿದ್ದಳು. ಬಳಿಕ ನರೇಶ್, ಮನೆಯಲ್ಲಿ ಮಾಡುತ್ತಿರುವ ಮದುವೆ ನನಗೆ ಇಷ್ಟವಿಲ್ಲ. ನಾವಿಬ್ಬರು ಓಡಿಹೋಗಿ ಮದುವೆಯಾಗೋಣ ಎಂದು ಭಾರ್ಗವಿಯನ್ನ ನಂಬಿಸಿ ಮಾರ್ಚ್ 3ರಂದು ಭುವನಗಿರಿಯ ಭೊಂಗಿರ್ ನ  ತನ್ನ ಜಮೀನಿಗೆ ಕರೆದೊಯ್ದು ಕೊಲೆ ಮಾಡಿದ್ದಾನೆ.

ಕೊಲೆ ಮಾಡಿದ ಮರುದಿನವೇ ಅಂದರೆ ಮಾರ್ಚ್ 4ರಂದು ಮನೆಯಲ್ಲಿ ನಿಶ್ಚಯಿಸಿದ ಯುವತಿಯ ಜೊತೆ ಅಮಾಯಕನಂತೆ ಮದುವೆಯಾಗಿದ್ದಾನೆ. ನಾಪತ್ತೆಯಾದ ಭಾರ್ಗವಿಯನ್ನ ಹುಡುಕಿದ ಪೊಲೀಸರು ನರೇಶ್ ಮೇಲೆ ಅನುಮಾನಗೊಂಡು ವಿಚಾರಣೆ ನಡೆಸಿದಾಗ ತನ್ನ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾನೆ.

ಘಟನೆ ನಡೆದ ಸ್ಥಳಕ್ಕೆ ನರೇಶ್ ಪೊಲೀಸರನ್ನ ಕರೆದೊಯ್ದು ಮೃತದೇಹವನ್ನ ತೋರಿಸಿದ್ದಾನೆ. ನರೇಶ್ ಭಾರ್ಗವಿ ತಲೆಯ ಮೇಲೆ ಕಲ್ಲು ಬಂಡೆಯನ್ನು ಹಾಕಿ ಕೊಂದಿದ್ದು, ಗುಂಡಿಯನ್ನು ತೋಡಿ ಹೆಣವನ್ನ ಹೂತು ಹಾಕಿದ್ದ. ಮಗಳ ಮೃತದೇಹ ಕಂಡ ಭಾರ್ಗವಿಯ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು.

 

Comments

Leave a Reply

Your email address will not be published. Required fields are marked *