ಭೋಪಾಲ್: ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನಿಗೆ ಚಿಕಿತ್ಸೆ ನೀಡುವ ವೇಳೆ ವೈದ್ಯರು ದೊಡ್ಡ ಎಡವಟ್ಟು ಮಾಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಯುವಕ ಸಾವನ್ನಪ್ಪಿದ್ದಾನೆಂದು ಇಡೀ ರಾತ್ರಿ ಶವಾಗಾರದಲ್ಲಿ ಇಟ್ಟಿದ್ದು, ಬೆಳಗ್ಗೆ ಮರಣೋತ್ತರ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ ವೇಳೆ ಆತನಿಗೆ ಇನ್ನೂ ಜೀವ ಇರೋದು ಗೊತ್ತಾಗಿದೆ.
ಹಿಮಾಂಶು ಭಾರದ್ವಾಜ್ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ. ಆತನನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಆತನಿಗೆ ಬ್ರೇನ್ ಡೆಡ್ ಆಗಿ, ನಂತರ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಹೇಳಿದ್ದರು. ನಾಗ್ಪುರ್‍ನಿಂದ ಚಿಂದ್ವಾಡಾಗೆ ಕರೆದೊಯ್ಯಲಾಗಿದ್ದ ಯುವಕನ ದೇಹವನ್ನು ರಾತ್ರಿಯಿಡೀ ಶವಾಗಾರದಲ್ಲಿ ಇಡಲಾಗಿತ್ತು. ಮರುದಿನ ಬೆಳಗ್ಗೆ ಮರಣೋತ್ತರ ಪರೀಕ್ಷೆಯ ಕೊಠಡಿಗೆ ಕೊಂಡೊಯ್ದಿದ್ದು, ವೈದ್ಯರು ಬ್ಲೇಡ್ ತೆಗೆದುಕೊಂಡು ಇನ್ನೇನು ದೇಹವನ್ನು ಕಟ್ ಮಾಡಬೇಕು ಎನ್ನುವಷ್ಟರಲ್ಲಿ ಯುವಕ ಇನ್ನೂ ಉಸಿರಾಡುತ್ತಿದ್ದುದು ಗೊತ್ತಾಗಿದೆ.

ಕೂಡಲೇ ಹಿಮಾಂಶು ನನ್ನು ಬೇರೆ ವಾರ್ಡ್‍ಗೆ ಶಿಫ್ಟ್ ಮಾಡಿ, ಚಿಕಿತ್ಸೆ ಮುಂದುವರಿಸಲಾಗಿದೆ. ಹಿಮಾಂಶು ಬದುಕಿದ್ದರೂ ಆತನನ್ನು ಶವಗಾರದಲ್ಲಿಟ್ಟ ಕಾರಣ ಸ್ಥಳದಲ್ಲಿ ಸಾಕಷ್ಟು ಗೊಂದಲ ಉಂಟಾಗಿ ಜನಜಂಗುಳಿ ಸೇರಿತ್ತು. ವೈದ್ಯರ ಎಡವಟ್ಟಿನ ಬಗ್ಗೆ ಸುದ್ದಿ ತಿಳಿದ ನಂತರ ಆಸ್ಪತ್ರೆಯ ಮುಂದೆ ಜಮಾಯಿಸಿದ ಜನ ಆಸ್ಪತ್ರೆ ಹಾಗೂ ವೈದ್ಯರ ನಿರ್ಲಕ್ಷ್ಯದ ವಿರುದ್ಧ ಘೋಷಣೆ ಕೂಗಲು ಶುರು ಮಾಡಿದ್ದರು.
ಹಿಮಾಂಶು ಉಸಿರಾಟ ನಿಂತುಹೋಗಿತ್ತು. ಆತನ ನಾಡಿ ಮಿಡಿತ ಕೂಡ ಇರಲಿಲ್ಲ. ಆದ್ರೆ ಇಂದು ಬೆಳಗ್ಗೆ ಉಸಿರಾಟದ ಅಂಗಗಳು ಮತ್ತೆ ಸ್ಪಂದಿಸಲು ಶುರು ಮಾಡಿವೆ ಎಂದು ಚಿಂದ್ವಾಡಾ ಜಿಲ್ಲಾಸ್ಪತ್ರೆಯ ವೈದ್ಯರಾದ ಡಾ. ಜೆದಾಮ್ ಹೇಳಿದ್ದಾರೆ.
ವ್ಯಕ್ತಿಗೆ ಬ್ರೇನ್ ಡೆಡ್ ಆದ ಸಂದರ್ಭದಲ್ಲಿ ಹೃದಯ ಮತ್ತು ಉಸಿರಾಟ ವ್ಯವಸ್ಥೆ ಕ್ಷಣಿಕವಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತವೆ. ಈ ಪ್ರಕರಣದಲ್ಲೂ ಹಾಗೇ ಆಗಿರಬಹುದು. ಹಿಮಾಂಶು ಇನ್ನೂ ಬ್ರೇನ್ ಡೆಡ್ ಆಗಿದ್ದು, ಇಲ್ಲಿ ಅಗತ್ಯ ಸೌಲಭ್ಯಗಳು ಇಲ್ಲದ ಕಾರಣ ನಾಗ್ಪುರಕ್ಕೆ ರವಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಹಿಮಾಂಶು ಮರಣೋತ್ತರ ಪರೀಕ್ಷೆಯ ಕೊಠಡಿಯಲ್ಲಿ ಕಸ ಗುಡಿಸುವ ವ್ಯಕ್ತಿಯನ್ನ ಹಿಡಿದುಕೊಂಡಾಗ ಆತ ಬದುಕಿದ್ದು ಗೊತ್ತಾಯ್ತು ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಹಿಮಾಂಶು ಎಸ್‍ಯುವಿ ಕಾರ್‍ನಲ್ಲಿದ್ದ ವೇಳೆ ಅಪಘಾತವಾಗಿದ್ದು, ಘಟನೆಯಿಂದ ಕಾರ್ ಸಂಪೂರ್ಣವಾಗಿ ಜಖಂ ಆಗಿದೆ.

Leave a Reply