ಬೆಂಗಳೂರಿನಲ್ಲಿ ಅಳಿವಿನಂಚಿನಲ್ಲಿದ್ದಾರಾ ಕನ್ನಡಿಗರು – ಫೇಸ್ ಬುಕ್ ನಲ್ಲಿ ಕನ್ನಡಿಗನ ಪೋಸ್ಟ್

ಬೆಂಗಳೂರು: ಕರ್ತವ್ಯ ನಿಷ್ಠೆ ತೋರಿದವನ ಮೇಲೆ ಹಲ್ಲೆ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ನೂರಾರು ಕನ್ನಡಿಗರೆದುರು ಓರ್ವ ಕನ್ನಡಿಗನಿಗೆ ಹಿಗ್ಗಾ-ಮುಗ್ಗಾ ಥಳಿಸಿದ ಘಟನೆ ಬೆಂಗಳೂರಿನ ಲಾಲ್‍ಬಾಗ್‍ನಲ್ಲಿ ನಡೆದಿದೆ.

ಉತ್ತರಪ್ರದೇಶ ಮೂಲದ ವ್ಯಕ್ತಿಯೊಬ್ಬ ಕನ್ನಡಿಗ ಇಮ್ರಾನ್ ಮೇಲೆ ಹಲ್ಲೆ ನಡೆಸಿದ್ದಾನೆ. ಕಳೆದ ಭಾನುವಾರ ಇಮ್ರಾನ್ ಲಾಲ್ ಬಾಗ್ ಗೆ ಹೋಗಿದ್ದರು. ಈ ವೇಳೆ ಉತ್ತರಪ್ರದೇಶ ಮೂಲದ ಕುಟುಂಬ ಕೂಡ ಲಾಲಾ ಬಾಗ್ ಗೆ ಬಂದಿತ್ತು. ಈ ಕುಟುಂಬದ ಮಗುವೊಂದು ಈಜುಕೊಳದ ಬಳಿ ಆಟ ಆಡಲು ತೆರಳಿತ್ತು. ನೀರು ಇರುವ ಹಿನ್ನೆಲೆ ಮಗುವನ್ನು ಆಟವಾಡಲು ಸೆಕ್ಯುರಿಟಿ ಗಾರ್ಡ್ ಅನುಮತಿ ನೀಡಿರಲಿಲ್ಲ. ಈ ವೇಳೆ ಮಗುವನ್ನು ನೀರಿನೊಳಕ್ಕೆ ಬಿಡದ ಕಾರಣ ಮಗುವಿನ ತಂದೆ ಸೆಕ್ಯುರಿಟಿ ಗಾರ್ಡ್ ಗೆ ಏಕಾಏಕಿ ಥಳಿಸಿದ್ದಾನೆ.

ಉತ್ತರಪ್ರದೇಶ ಮೂಲದ ವ್ಯಕ್ತಿ ಸೆಕ್ಯೂರಿಟಿ ಗಾರ್ಡ್ ನನ್ನು ಹಿಡಿದು ಹೊಡೆದಿದ್ದು, ಇದನ್ನು ಸೆಕ್ಯೂರಿಟಿ ಗಾರ್ಡ್ ಮೇಲಿನ ಹಲ್ಲೆಯನ್ನು “ಯಾಕ್ರಿ.. ಸುಮ್ಮನೇ ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ಮಾಡ್ತಿರಾ..” ಎಂದು ಇಮ್ರಾನ್ ಕನ್ನಡದಲ್ಲೇ ಪ್ರಶ್ನಿಸಿದ್ದರು. ಇಮ್ರಾನ್ ಮಧ್ಯಪ್ರವೇಶಕ್ಕೆ ಅಸಮಾಧಾನಗೊಂಡ ಉತ್ತರಪ್ರದೇಶದ ವ್ಯಕ್ತಿ ಇಮ್ರಾನ್ ಅವರನ್ನು ಹಿಗ್ಗಾ-ಮುಗ್ಗಾ ಥಳಿಸಿದ್ದಾನೆ.

ಹಲ್ಲೆ ವೇಳೆ ನೂರಾರು ಕನ್ನಡಿಗರು ಘಟನೆ ನೋಡುತ್ತಾ ಮೌನಕ್ಕೆ ಶರಣಾಗಿದ್ದರು. ಸಾರ್ವಜನಿಕರ ಬೇಜವಾಬ್ದಾರಿತನ ಕುರಿತು ಇಮ್ರಾನ್ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತು ಇಮ್ರಾನ್ ಫೇಸ್ ಬುಕ್ ನಲ್ಲಿ ರಾಜ್ಯರಾಜಧಾನಿಯಲ್ಲಿ ಅಳಿವಿನಂಚಿನಲ್ಲಿದ್ದಾರಾ ಕನ್ನಡಿಗರು ಎಂದು ಪ್ರಶ್ನಿಸಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಘಟನೆ ತಾರಕಕ್ಕೇರುತ್ತಿದ್ದಂತೆ ಉತ್ತರಪ್ರದೇಶ ಗೂಂಡಾನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Comments

Leave a Reply

Your email address will not be published. Required fields are marked *