ಚುನಾವಣಾ ಚಾಣಾಕ್ಯ ಪ್ರಶಾಂತ್ ಕಿಶೋರ್ ಮತ್ತೆ ಬಿಜೆಪಿಯ ಕೈ ಹಿಡಿಯಲ್ಲ!

ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಬಿಜೆಪಿ ಜೊತೆ ಕೈಜೋಡಿಸಲಿದ್ದಾರೆ ಎಂಬ ವದಂತಿಯನ್ನ ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ (ಐ-ಪ್ಯಾಕ್) ತಳ್ಳಿಹಾಕಿದೆ.

ಐ-ಪ್ಯಾಕ್ ನ ಸಂಸ್ಥಾಪಕರಾಗಿರೋ ಪ್ರಶಾಂತ್ ಕಿಶೋರ್ ಕೆಲವು ದಿನಗಳ ಹಿಂದೆ ಪಕ್ಷದ ನಾಯಕರನ್ನ ಭೇಟಿಯಾಗಿದ್ದರು. ಈ ಹಿನ್ನೆಲೆಯಲ್ಲಿ, ಪ್ರಶಾಂತ್ ಹಾಗೂ ಅವರ ತಂಡ 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಹಾಗೂ ಮೋದಿ ಪವರಾಗಿ ಕಾರ್ಯತಂತ್ರ ರೂಪಿಸಿದಂತೆ ಈ ಬಾರಿಯೂ ಬಿಜೆಪಿ ಜೊತೆ ಕೈಜೋಡಿಸಲಿದ್ದಾರೆ ಎಂದು ವದಂತಿ ಹಬ್ಬಿತ್ತು.

ಆದ್ರೆ ಐ-ಪ್ಯಾಕ್‍ನ ಹಿರಿಯ ಸದಸ್ಯರು ಹಾಗೂ ಕಿಶೋರ್ ಆಪ್ತರಾಗಿರುವ ವ್ಯಕ್ತಿ ಈ ಬಗ್ಗೆ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದು, ಈ ರೀತಿಯ ವರದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಕಿಶೋರ್ ಅವರು ಎಲ್ಲಾ ಪ್ರಮುಖ ಪಕ್ಷಗಳ ನಾಯಕರನ್ನ ಭೇಟಿಯಾಗುತ್ತಿರುತ್ತಾರೆ. ಇತ್ತೀಚೆಗೆ ಬಿಜೆಪಿ ಸದಸ್ಯರನ್ನ ಭೇಟಿ ಮಾಡಿ ಚರ್ಚೆ ನಡೆಸಿದ್ದನ್ನ ಬೇರೆ ರೀತಿಯಲ್ಲಿ ಪರಿಗಣಿಸಬಾರದು ಎಂದಿದ್ದಾರೆ.

ಕಳೆದ 4 ವರ್ಷಗಳಲ್ಲಿ ಕಿಶೋರ್ ಹಾಗೂ ಐ-ಪ್ಯಾಕ್ ಹಲವು ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಂಡಿವೆ. ಪ್ರಶಾಂತ್ ಕಿಶೋರ್ ಅವರ ಭಾರತೀಯ ರಾಜಕೀಯ ಕಾರ್ಯತಂತ್ರದಲ್ಲಿನ ಪ್ರಯಾಣ ಬಿಜೆಪಿಯ 2014ರ ಲೋಕಸಭಾ ಚುನಾವಣೆಯ ಪ್ರಚಾರದಿಂದ ಶುರುವಾಯಿತು. ನಂತರ 2015ರಲ್ಲಿ ಪ್ರಶಾಂತ್ ಕಿಶೋರ್ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಬಿಹಾರದ ಸಂಯುಕ್ತ ಜನತಾ ದಳದೊಂದಿಗೆ ಕೈಜೋಡಿಸಿದ್ದರು.

ಬಿಜೆಪಿ ನೇತೃತ್ವದ ಎನ್‍ಡಿಎ ಒಕ್ಕೂಟ ಭಾರೀ ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಿತು. ನಂತರ ಸಂಯುಕ್ತ ಜನತಾದಳ, ರಾಷ್ಟ್ರೀಯ ಜನತಾ ದಳ ಹಾಗೂ ಕಾಂಗ್ರೆಸ್ ಪಕ್ಷಗಳನ್ನ ಒಳಗೊಂಡ ನಿತೀಶ್ ಕುಮಾರ್ ನೇತೃತ್ವದ ಮಹಾಘಟ್‍ಬಂಧನ್ 2015ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿತ್ತು. ಹೀಗಾಗಿ ಎರಡೂ ಚುನಾವಣೆಗಳು ಪ್ರಶಾಂತ್ ಕಿಶೋರ್‍ಗೆ ಯಶಸ್ಸು ತಂದುಕೊಟ್ಟಿತ್ತು.

2017ರ ಪಂಜಾಬ್ ವಿಧಾನಸಭಾ ಚುನಾವಣೆ ವೇಳೆ ಪ್ರಶಾಂತ್ ಕಿಶೋರ್ ತಂಡ ಕಾಂಗ್ರೆಸ್‍ನೊಂದಿಗೆ ಕೈಜೋಡಿಸಿತ್ತು. ಆಗಲೂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಎದುರಾಳಿಯನ್ನ ಮಣಿಸಿ ಅಧಿಕಾರ ಹಿಡಿದರು. ಹಲವು ವರ್ಷಗಳಿಂದ ಚುನಾವಣೆಯಲ್ಲಿ ಸತತ ಸೋಲು ಕಂಡಿದ್ದ ಕಾಂಗ್ರೆಸ್‍ಗೆ ಈ ಗೆಲುವು ಸಮಾಧಾನ ತಂದುಕೊಟ್ಟಿತ್ತು.

ಆದ್ರೆ ಪ್ರಶಾಂತ್ ಕಿಶೋರ್ ಅಂದುಕೊಂಡಂತೆ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ಮೈತ್ರಿ ನಿರ್ಧಾರ ವರ್ಕೌಟ್ ಆಗಲಿಲ್ಲ. ಉತ್ತರಪ್ರದೇಶದಲ್ಲಿ ಬಿಜೆಪಿ 4ರಲ್ಲಿ 3 ಸೀಟ್‍ಗಳನ್ನ ಗೆದ್ದು ಕಿಶೋರ್‍ಗೆ ಮುಖಭಂಗವಾಗಿತ್ತು.

ಪ್ರಸ್ತುತ ಐ-ಪ್ಯಾಕ್ ಆಂಧ್ರಪ್ರದೇಶದ ವೈಎಸ್‍ಆರ್ ಕಾಂಗ್ರೆಸ್ ಜೊತೆ ಕಾರ್ಯ ನಿರ್ವಹಿಸುತ್ತಿದೆ. ಪಕ್ಷದ ಮುಖ್ಯಸ್ಥರಾದ ಜಗನ್ ಮೋಹನ್ ರೆಡ್ಡಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಲೋಕಸಭಾ ಚುನಾವಣೆಯ ವೇಳೆ ಪ್ರಶಾಂತ್ ಕಿಶೋರ್ ಸಲಹೆಯಂತೆ ಚಾಯ್‍ಪೇ ಚರ್ಚಾ ಬಿಜೆಪಿಗೆ ಭಾರೀ ಯಶಸ್ಸನ್ನು ತಂದುಕೊಟ್ಟಿತ್ತು. ಇದಾದ ಬಳಿಕ ಅಮಿತ್ ಶಾ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ ಪ್ರಶಾಂತ್ ಕಿಶೋರ್ ಬಿಜೆಪಿ ಪಾಳೆಯವನ್ನು ತೊರೆದಿದ್ದರು.

Comments

Leave a Reply

Your email address will not be published. Required fields are marked *