ಹೈದರಾಬಾದ್: ಶಾಲೆಗೆ ಹೋಗಲು ನಿರಾಕರಿಸಿದ್ದಕ್ಕೆ ವ್ಯಕ್ತಿಯೊಬ್ಬರು ತನ್ನ ಮಗನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಇಲ್ಲಿನ ಭದ್ರಾಚಲಂನಲ್ಲಿ ಈ ಘಟನೆ ನಡೆದಿದ್ದು, ಇದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುಡು ಬಿಸಿಲಿನಲ್ಲಿ ಬಾಲಕನನ್ನು ಕಂಬಕ್ಕೆ ಕಟ್ಟಿ ಶಿಕ್ಷಿಸಿರುವುದಕ್ಕೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರು ಹೇಳುವ ಪ್ರಕಾರ, ಬುಡಕಟ್ಟು ಜನಾಂಗದ ಈ ಅಪ್ರಾಪ್ತ ಬಾಲಕ ಗೊಲ್ಲ 6ನೇ ತರಗತಿ ವಿದ್ಯಾರ್ಥಿಯಾಗಿದ್ದು, ಕಮಲಾಪುರ್‍ನ ಆದರ್ಶ ಹೈ ಸ್ಕೂಲ್‍ನಲ್ಲಿ ಓದುತ್ತಿದ್ದಾನೆ. ಬಾಲಕ ಕಳೆದ ಒಂದು ವಾರದಿಂದ ಶಾಲೆಗೆ ಹೋಗಿರಲಿಲ್ಲ. ಇದರಿಂದ ಕೋಪಗೊಂಡ ತಂದೆ ಬಾಲಕನನ್ನು ಕಂಬಕ್ಕೆ ಕಟ್ಟಿ ಹಾಕಿದ್ದಾರೆ.

ಘಟನೆ ಬಗ್ಗೆ ಮಾಹಿತಿ ತಿಳಿದ ಮಕ್ಕಳ ಹಕ್ಕುಗಳ ಸಂಸ್ಥೆ ಬಾಲಲ ಹಕ್ಕುಲ ಸಂಘಂ, ಭದ್ರಾಚಲಂನ ಜಂಟಿ ಆಯುಕ್ತರಾದ ಪಮೇಲಾ ಸತ್ಪತಿ ಅವರಿಗೆ ವಿಷಯ ತಿಳಿಸಿದೆ. ಬಳಿಕ ಪೊಲೀಸ್ ತಂಡವನ್ನ ಗ್ರಾಮಕ್ಕೆ ಕಳಿಸಲಾಗಿದೆ. ಸರ್ಕಲ್ ಇನ್ಸ್ ಪೆಕ್ಟರ್ ಮುಕಲಪಲ್ಲಿ ಪೋಷಕರಿಗೆ ಕೌನ್ಸೆಲಿಂಗ್ ಮಾಡಿದ್ದಾರೆ. ಆದ್ರೆ ಪೋಷಕರು ಬಾಲಕನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಆತನನ್ನು ಸರ್ಕಾರಿ ಹಾಸ್ಟೆಲ್‍ಗೆ ಕಳಿಸಬೇಕು ಎಂದು ಮಕ್ಕಳ ಹಕ್ಕುಗಳ ಸಂಘ ಒತ್ತಾಯಿಸಿದೆ.

ಕಳೆದ ವಾರ ಕರೀಂನಗರ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕನೊಬ್ಬ ತನ್ನ ತಂದೆ ಕುಡಿತದ ಚಟದ ಬಗ್ಗೆ ಹಾಗೂ ಯಾವಾಗ್ಲೂ ನಿಂದಿಸುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದಾಗ, ತಂದೆಯನ್ನ ಬಂಧಿಸಿ ಜೈಲಿಗೆ ಕಳಿಸಲಾಗಿತ್ತು.


Leave a Reply