ಕೈಗೆ ಕೋಳ ಹಾಕದೆ ಕೈದಿಗಳಿಂದ ವಸತಿ ಗೃಹದ ಸ್ವಚ್ಛತೆ

ಮಂಗಳೂರು: ಮಂಗಳೂರಿನ ಜೈಲು ಅಪರಾಧಿಗಳ ಪಾಲಿನ ನರಕ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇದಕ್ಕೆ ಸಾಕ್ಷಿ ಜೈಲಿನ ಎದುರುಗಡೆ ಇರುವ ಜೈಲರ್ ವಸತಿಗೃಹವನ್ನು ಕೈದಿಗಳಿಂದಲೇ ಕ್ಲೀನ್ ಮಾಡಿಸಿದ್ದಾರೆ.

ವಿಚಾರಣಾಧೀನ ಕೈದಿಗಳಿಗೆ ಕೈಗೆ ಕೊಳ ಹಾಕದೆ ಸ್ವತಂತ್ರವಾಗಿ ಬಿಟ್ಟು ವಸತಿಗೃಹ ಕ್ಲೀನ್ ಮಾಡಿಸಿದ್ದಾರೆ. ಇದು ಜೈಲಿನ ಮತ್ತೊಂದು ಅಕ್ರಮಕ್ಕೆ ಸಾಕ್ಷಿಯಾಗಿದೆ. ಸುಮಾರು 7 ರಿಂದ 8 ಕೈದಿಗಳು ಕ್ಲೀನ್ ಮಾಡುತ್ತಿದ್ದರೆ ಪೊಲೀಸರು ಮಾತ್ರ ಕೈದಿಗಳನ್ನು ದೂರದಲ್ಲೇ ಬಿಟ್ಟು ತಮ್ಮಷ್ಟಕ್ಕೆ ಹರಟೆ ಹೊಡೆಯುತ್ತಾ ಕುಳಿತಿದ್ದರು. ಈ ಮೂಲಕ ಜೈಲಿನ ಅಕ್ರಮಗಳಿಗೆ ಪರೋಕ್ಷವಾಗಿ ಭಾಗಿಯಾಗಿದ್ದಾರೆ. ಈ ಎಲ್ಲಾ ದೃಶ್ಯಗಳು ಪಬ್ಲಿಕ್ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಜೈಲಿನ ಒಳಭಾಗದಲ್ಲಿ ಕೈದಿಗಳಿಂದ ಕೆಲಸ ಮಾಡಿಸುವುದು ಸಾಮಾನ್ಯವಾಗಿದೆ. ಆದರೆ ಜೈಲಿನ ಹೊರಗೆ ಸಾರ್ವಜನಿಕ ಪ್ರದೇಶದಲ್ಲೂ ಕೈದಿಗಳನ್ನು ಸ್ವತಂತ್ರವಾಗಿ ಬಿಟ್ಟು ಕೆಲಸ ಮಾಡಿಸಿರುವುದು ಮಂಗಳೂರು ಜೈಲಿನಲ್ಲಿ ಮಾತ್ರ. ಅಧಿಕಾರಿಗಳ ಸೂಚನೆಯಂತೆ ಕೆಲಸಕ್ಕೆಂದು ಹೊರಗೆ ಬಂದ ಕೈದಿಗಳು ಅಲ್ಲಿಂದಲೇ ತಪ್ಪಿಸಿಕೊಂಡು ಹೋಗಿ ಮತ್ತೊಂದು ದುಷ್ಕೃತ್ಯ ಎಸಗಿದರೆ ಯಾರು ಹೊಣೆ ಎಂಬ ಮಾತು ಸಾರ್ವಜನಿಕವಾಗಿ ವ್ಯಕ್ತವಾಗಿದೆ.

ಈ ಹಿಂದೆ ಜೈಲಿನ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜೈಲಿನೊಳಗೇ ಒಂದೇ ದಿನ ಇಬ್ಬರು ಪಾತಕಿಗಳ ಹತ್ಯೆ ನಡೆದಿದೆ. ಗುಂಡು ಪಾರ್ಟಿ ನಡೆಸಿರೋದು, ತಪಾಸಣೆಗೆ ತೆರಳಿದ್ದ ಸ್ಥಳೀಯ ಪೊಲೀಸರಿಗೆ ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಇಲ್ಲಿ ಸ್ಮರಿಸಬಹುದು. ಈ ಹಿಂದೆ ಇದೇ ರೀತಿ ಕೈದಿಗಳಿಂದ ವಸತಿಗೃಹ ಕ್ಲೀನ್ ಮಾಡಿಸಿದ್ದ ವರದಿಯನನ್ನ ಪಬ್ಲಿಕ್ ಟಿವಿಯಲ್ಲಿ ಪ್ರಸಾರ ಮಾಡಿದ ಬಳಿಕ ಅಂದಿನ ಜೈಲು ಅಧೀಕ್ಷಕರನ್ನು ಅಮಾನಾತು ಮಾಡಲಾಗಿತ್ತು.

Comments

Leave a Reply

Your email address will not be published. Required fields are marked *