ವ್ಯಕ್ತಿಯ ತಲೆಯಿಂದ 1.8 ಕೆಜಿ ತೂಕದ ಗೆಡ್ಡೆ ತೆಗೆದ ವೈದ್ಯರು!

ಮುಂಬೈ: ವ್ಯಕ್ತಿಯ ತಲೆಯಲ್ಲಿ ಬೆಳೆದಿದ್ದ 1.8 ಕೆಜಿ ತೂಕದ ಗೆಡ್ಡೆಯನ್ನ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯುವಲ್ಲಿ ಮುಂಬೈನ ನಾಯರ್ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ.

31 ವರ್ಷದ ಬಟ್ಟೆ ವ್ಯಾಪಾರಿ ಸಂತಲಾಲ್ ಪಾಲ್ ಅವರ ತಲೆಯ ಮೇಲೆ ದೈತ್ಯ ಗೆಡ್ಡೆ ಬೆಳೆದು, ಅವರಿಗೆ ಎರಡು ತಲೆಗಳಿದ್ದಂತೆ ಕಾಣುತ್ತಿತ್ತು. ವೈದ್ಯರು 7 ಗಂಟೆಗಳ ಶಸ್ತ್ರಚಿಕಿತ್ಸೆ ಬಳಿಕ 7.873 ಕೆಜಿ ತೂಕದ ಆ ಗೆಡ್ಡೆಯನ್ನ ತೆಗೆದಿದ್ದಾರೆ.

ಇಷ್ಟು ದೈತ್ಯ ತಲೆಯ ಗೆಡ್ಡೆಯನ್ನ ಹೊರತೆಗೆದಿರುವುದು ವಿಶ್ವದಲ್ಲೇ ಮೊದಲಿರಬಹುದು ಎಂದು ಕೂಡ ಹೇಳಲಾಗಿದೆ. ಈ ಹಿಂದೆ ಇದೇ ರೀತಿಯ ಪ್ರಕರಣದಲ್ಲಿ ಗೆಡ್ಡೆಯ ತೂಕ 1.4 ಕೆಜಿ ಇತ್ತು.

ಸಂತಲಾಲ್ ಉತ್ತರಪ್ರದೇಶ ನಿವಾಸಿಯಾಗಿದ್ದು, ಚಿಕಿತ್ಸೆಗಾಗಿ ಮುಂಬೈನ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಲಾಗಿತ್ತು. ಫೆಬ್ರವರಿ ಆರಂಭದಲ್ಲಿ ಅವರು ನಾಯರ್ ಆಸ್ಪತ್ರೆಗೆ ದಾಖಲಾಗಿದ್ದರು. ಆರಂಭದಲ್ಲಿ ಅವರ ತಲೆಯ ಮೇಲೆ ಊತ, ಭಾರ ಹಾಗೂ ತಲೆ ನೋವು ಇತ್ತು. ಪರಿಶೀಲನೆಯ ಬಳಿಕ 30*30*20 ಸೆ.ಮೀ ನ ಗೆಡ್ಡೆ ಬೆಳೆದಿರುವುದು ಗೊತ್ತಾಗಿ ವೈದ್ಯರೇ ಅಚ್ಚರಿಪಟ್ಟಿದ್ದರು. ಇಷ್ಟು ದೊಡ್ಡ ಗೆಡ್ಡೆಯನ್ನ ವೈದ್ಯರು ಕೂಡ ಈ ಹಿಂದೆ ನೋಡಿರಲಿಲ್ಲ ಎನ್ನಲಾಗಿದೆ.

ಸಂತಲಾಲ್ ಅವರನ್ನ ಮೆದುಳಿನ ಸಿಟಿ ಹಾಗೂ ಎಮ್‍ಆರ್ ಸ್ಕ್ಯಾನ್‍ಗೆ ಒಳಪಡಿಸಲಾಗಿತ್ತು. ಗೆಡ್ಡೆಯ ರಕ್ತಚಲನೆಯ ಬಗ್ಗೆ ಅಧ್ಯಯನ ಮಾಡಲು ವಿಶೇಷ ಸಿಟಿ ಆಂಜಿಯೋಗ್ರಾಫಿ ಮಾಡಲಾಗಿತ್ತು. ತನಿಖೆಯ ಬಳಿಕ ನಾವು ಫೆಬ್ರವರಿ 14ರಂದು ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದೆವು. ಇದು ಅತ್ಯಂತ ಅಪಾಯಕರ ಶಸ್ತ್ರಚಿಕಿತ್ಸೆಯಾಗಿತ್ತು. ಇಷ್ಟು ದೊಡ್ಡ ಗೆಡ್ಡೆ ಬೆಳೆಯುವುದು ತುಂಬಾ ವಿರಳ ಹಾಗೂ ವೈದ್ಯಕೀಯ ಸವಾಲು ಎಂದು ಪ್ರಾಧ್ಯಾಪಕ ಹಾಗೂ ನರಶಸ್ತ್ರಚಿಕಿತ್ಸೆ ಮುಖ್ಯಸ್ಥರಾದ ಡಾ ತತ್ರಿಮೂರ್ತಿ ನಾಡಕರ್ಣಿ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ.

ಶಸ್ತ್ರಚಿಕಿತ್ಸೆಯ ವೇಳೆ ರೋಗಿಗೆ 11 ಬಾಟಲಿ ರಕ್ತ ನೀಡಲಾಗಿದ್ದು, 7 ಗಂಟೆಗಳವರೆಗೆ ಶಸ್ತ್ರಚಿಕಿತ್ಸೆ ನಡೆದಿದೆ.

Comments

Leave a Reply

Your email address will not be published. Required fields are marked *