ಟಿಕೆಟ್ ಕಲೆಕ್ಟರ್ ನಿಂದ ಸ್ಟೇಶನ್ ಮಾಸ್ಟರ್ ವರೆಗೆ ಈ ರೈಲ್ವೆ ನಿಲ್ದಾಣದ ತುಂಬೆಲ್ಲಾ ಮಹಿಳಾ ಸಿಬ್ಬಂದಿ- ಇದು ದೇಶದ 2ನೇ ಮಹಿಳಾ ರೈಲ್ವೆ ನಿಲ್ದಾಣ

ಜೈಪುರ: ಟಿಕೆಟ್ ಕಲೆಕ್ಟರ್ ನಿಂದ ನಿಲ್ದಾಣದ ಸೂಪರಿಂಟೆಂಡೆಂಟ್, ಟಿಕೆಟ್ ಕೌಂಟರ್, ಸ್ಟೇಶನ್ ಮಾಸ್ಟರ್ ಮತ್ತು ಪಾಯಿಂಟ್ಸ್ ಮ್ಯಾನ್ ವರೆಗೆ ಈ ರೈಲ್ವೆ ನಿಲ್ದಾಣದಲ್ಲಿ ಕೇವಲ ಮಹಿಳೆಯರೇ ಕೆಲಸ ಮಾಡುತ್ತಾರೆ.

ರಾಜಸ್ಥಾನದ ಜೈಪುರ್‍ನ ಗಾಂಧಿನಗರದ ರೈಲ್ವೆ ನಿಲ್ದಾಣದಲ್ಲಿ 40 ಮಹಿಳೆಯರು ಕಾರ್ಯನಿರ್ವಹಿಸ್ತಾರೆ. ರೈಲ್ವೆ ನಿಲ್ದಾಣದ ಎಲ್ಲ ಕೆಲಸಗಳನ್ನು ಮಹಿಳಾ ಸಿಬ್ಬಂದಿಯೇ ಮಾಡ್ತಾರೆ. ರೈಲ್ವೆ ಹಳಿಗಳ ನಿರ್ವಹಣೆ, ರೈಲುಗಳಿಗೆ ಸಿಗ್ನಲ್ ಸೇರಿದಂತಹ ಕೆಲಸಗಳನ್ನು ಮಹಿಳೆಯರೇ ಮಾಡ್ತಾರೆ. ನಿಲ್ದಾಣದಲ್ಲಿ ಇತರೆ ಟಿಕೆಟ್ ನೀಡುವಿಕೆ ಮತ್ತು ಟಿಕೆಟ್ ಸಂಗ್ರಹಣೆಗೆ ಕೂಡ ಮಹಿಳೆಯರೇ ನೇಮಕವಾಗಿದ್ದಾರೆ. ರೈಲ್ವೆ ನಿಲ್ದಾಣದ ಪ್ಲಾಟ್‍ಫಾರಂ ಭದ್ರತೆಗಾಗಿ ಮಹಿಳಾ ಪೇದೆಯರನ್ನ ನೇಮಕ ಮಾಡಲಾಗಿದೆ ಎಂದು ಜೈಪುರ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಸೌಮ್ಯ ಮಾಥುರ್ ಹೇಳಿದ್ದಾರೆ. ಮುಂಬೈನ ಮಾತುಂಗಾ ರೈಲ್ವೆ ನಿಲ್ದಾಣದ ನಂತರ ಗಾಂಧಿನಗರ ನಿಲ್ದಾಣ ದೇಶದ ಎರಡನೇ ಸಂಪೂರ್ಣ ಮಹಿಳಾ ಸಿಬ್ಬಂದಿಯುಳ್ಳ ರೈಲ್ವೆ ಸ್ಟೇಶನ್ ಆಗಿದೆ.

ಜೈಪುರ ಮತ್ತು ದೆಹಲಿ ನಗರಗಳ ಮಧ್ಯೆ ಬರುವ ಈ ರೈಲ್ವೆ ನಿಲ್ದಾಣ ಪ್ರತಿನಿತ್ಯ ಜನಸಂದಣಿಯಿಂದ ಕೂಡಿರುತ್ತದೆ. ಗಾಂಧಿನಗರ ನಿಲ್ದಾಣದಲ್ಲಿ ದಿನಕ್ಕೆ 25 ರೈಲುಗಳು ನಿಲುಗಡೆ ಆಗುತ್ತವೆ. ಪ್ರವಾಸಿ ರೈಲ್ವೆ ‘ಮಹರಾಜ್ ಎಕ್ಸ್ ಪ್ರೆಸ್’ ಇಲ್ಲಿಯೇ ಕೊನೆಗುಳ್ಳುತ್ತದೆ. ಹೈ ಸ್ಪೀಡ್ (ರಾಜಧಾನಿ ಮತ್ತು ಶತಾಬ್ದಿ) ಮತ್ತು ಗೂಡ್ಸ್ ರೈಲುಗಳು ಸೇರಿದಂತೆ ದಿನಕ್ಕೆ 50 ರೈಲುಗಳು ಗಾಂಧಿನಗರ ನಿಲ್ದಾಣದ ಮೂಲಕ ಹೋಗುತ್ತವೆ. ಅಂದಾಜು 7 ಸಾವಿರ ಪ್ರಯಾಣಿಕರು ಈ ನಿಲ್ದಾಣದ ಮೂಲಕವೇ ಪ್ರಯಾಣಿಸುತ್ತಾರೆ.

ಜನಸಂದಣಿಯಿಂದ ತುಂಬಿ ತುಳುಕುವ ರೈಲ್ವೆ ನಿಲ್ದಾಣವಾದ್ರೂ ಎಲ್ಲ ಮಹಿಳಾ ಸಿಬ್ಬಂದಿ ಕ್ಷಮತೆಯಿಂದ ಕಾರ್ಯನಿರ್ವಹಿಸ್ತಾರೆ. 8 ಗಂಟೆಯ ಶಿಫ್ಟ್ ನಂತೆ ಎಲ್ಲ ಮಹಿಳಾ ನೌಕರರು ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ. ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸುವ ಎಲ್ಲ ಮಹಿಳಾ ಸಿಬ್ಬಂದಿಯ ರಕ್ಷಣೆಗಾಗಿ 11 ಆರ್‍ಪಿಎಫ್ ಮಹಿಳಾ ಪೊಲೀಸ್ ಪೇದೆಗಳನ್ನು ನೇಮಿಸಲಾಗಿದೆ.

ರೈಲು ಸಂಚಾರವೇ ನನ್ನ ಜಾಬ್: ಯಾವ ರೈಲನ್ನು ಯಾವ ಟ್ರ್ಯಾಕ್ ಗೆ ತರಬೇಕು, ಯಾವಗ ಸಿಗ್ನಲ್ ಹಾಕಬೇಕು ಎಂಬುವುದು ನನ್ನ ಕೆಲಸ. ನಮ್ಮ ನಿಲ್ದಾಣದಿಂದ ಹಾದು ಹೋಗುವ ಎಲ್ಲ ರೈಲುಗಳಿಗೆ ಬಾವುಟ ತೋರಿಸುವುದರ ಜೊತೆ ಪ್ರಯಾಣಿಕರಿಗೆ ಸುರಕ್ಷತೆ ಹಾಗೂ ಉತ್ತಮ ಸೇವೆಯನ್ನು ಒದಗಿಸುವುದು ನಮ್ಮ ಗುರಿಯಾಗಿದೆ ಅಂತಾ ಸ್ಟೇಶನ್ ಮಾಸ್ಟರ್ ಆಂಜೆಲ್ ಸ್ಟೆಲ್ಲಾ ಹೇಳ್ತಾರೆ.

ನಿಲ್ದಾಣದಲ್ಲಿ ಕೆಲವರು ತೊಂದರೆಕೊಟ್ಟರೆ ಏನು ಮಾಡ್ತೀರಾ ಎಂಬ ಪ್ರಶ್ನೆಗೆ, ತಲೆ ಅಲ್ಲಾಡಿಸುತ್ತಾ, ಅದೇನು ಭಯ ಪಡುವಂತಹ ವಿಷಯವೇನಲ್ಲ. ಮಹಿಳೆಯರು ಯಾರಿಗಿಂತಲೂ ಕಡಿಮೆ ಇಲ್ಲ ಎಂದು ಸ್ಟೆಲ್ಲಾ ಉತ್ತರಿಸಿದರು.

Comments

Leave a Reply

Your email address will not be published. Required fields are marked *