ಕರಾವಳಿಯಲ್ಲಿ ನಾಲ್ಕು ದಿನ ಅಮಿತ್ ಶಾ ಟೂರ್- ಬಿಜೆಪಿಯಲ್ಲಿ ಮಿಂಚಿನ ಸಂಚಲನ

ಮಂಗಳೂರು: ಬಿ.ಜೆ.ಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಿರಂತರ ನಾಲ್ಕು ದಿನಗಳ ರಾಜ್ಯ ಪ್ರವಾಸಕ್ಕೆ ಚಾಲನೆ ಸಿಕ್ಕಿದೆ. ದೆಹಲಿಯಿಂದ 7.30ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣಕ್ಕೆ ಅಮಿತ್ ಶಾ ಆಗಮಿಸಿದ್ದಾರೆ.

ಜಿಲ್ಲಾ ಬಿ.ಜೆ.ಪಿಯಿಂದ ರಾಷ್ಟ್ರೀಯ ಅಧ್ಯಕ್ಷರಿಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು. ರಾಜ್ಯ ವಿಧಾನಸಭಾ ಚುನಾವಣೆಯ ಪೂರ್ವಭಾವಿಯಾಗಿ ಮೊದಲ ಹಂತದ ರಾಜ್ಯಪ್ರವಾಸವನ್ನು ಕರಾವಳಿ ಜಿಲ್ಲೆಯಿಂದ ಆರಂಭಿಸಿರುವ ಅಮಿತ್ ಶಾ ಇಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾಸ್ತವ್ಯ ಹೂಡಿದ್ದಾರೆ. ಶಾ ಆಗಮನ ಹಿನ್ನೆಲೆಯಲ್ಲಿ ಬಜ್ಪೆಯ ಕೆಂಜಾರುವಿನಲ್ಲಿ ಬಿ.ಜೆ.ಪಿ ಕಾರ್ಯಕರ್ತರು, ಜನಸ್ತೋಮವೇ ನೆರೆದಿತ್ತು.

ಜಿಲ್ಲಾ ಬಿ.ಜೆ.ಪಿ ಅಮಿತ್ ಶಾ ಸಂಚಾರಿ ವೇದಿಕೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡುವ ಸಿದ್ಧತೆಯನ್ನು ನಡೆಸಿತ್ತು. ವಿಮಾನ ನಿಲ್ದಾಣದಿಂದ ಕೆಂಜಾರುವಿಗೆ ಆಗಮಿಸಿದ ಶಾ ಅವರಿಗೆ ವೇದಿಕೆಯಲ್ಲಿ ಸನ್ಮಾನ ಮಾಡಲಾಯಿತು. ಆದರೆ ಅಮಿತ್ ಶಾ ಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಭಾಷಣ ಮಾಡದೆ ಹೊರಟರು. ಇದರಿಂದಾಗಿ ಶಾ ಭಾಷಣಕ್ಕೆ ಗಂಟೆಗಟ್ಟಲೆ ಕಾದಿದ್ದ ಕಾರ್ಯಕರ್ತರಿಗೆ ಕೊಂಚ ಬೇಸರವಾಯಿತು.

ನಾಯಕರು ಕಾರ್ಯಕರ್ತರ, ಅಭಿಮಾನಿಗಳ ಕ್ಷಮೆ ಕೋರಿದರು. ಬಳಿಕ ಅಮಿತ್ ಶಾ ರಸ್ತೆ ಮಾರ್ಗದ ಮೂಲಕ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿದರು. ಪೊಲೀಸರು ರಸ್ತೆಯುದ್ದಕ್ಕೂ ಬಿಗಿ ಭದ್ರತೆಯನ್ನು ಕೈಗೊಂಡಿದ್ದರು. ನಾಳೆ ಅಮಿತ್ ಶಾ ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಪಡೆದು ಪುತ್ತೂರು, ಬಂಟ್ವಾಳ, ಉಡುಪಿಯ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಉಡುಪಿಯಲ್ಲೆ ವಾಸ್ತವ್ಯ ಮಾಡಿ ಉಡುಪಿಯಲ್ಲಿ ನಾಲ್ಕು ಕಾರ್ಯಕ್ರಮ ಮುಗಿಸಿ ಕಾರವಾರಕ್ಕೆ ತೆರಳಲಿದ್ದಾರೆ.

ಸ್ಥಳೀಯ ಬಿಜೆಪಿ ನಾಯಕ ಸುದರ್ಶನ್ ಮಾತನಾಡಿ, ಅಮಿತ್ ಶಾ ಆಗಮನದಿಂದ ಪಕ್ಷದಲ್ಲಿ ಸಂಚಲನ ಸೃಷ್ಟಿಯಾಗಿದೆ. ಕಾರ್ಯಕರ್ತರ ಹುರುಪು ಹೆಚ್ಚಾಗಿದೆ ಎಂದರು. ಮೂರು ದಿನ ಕರಾವಳಿ ಜಿಲ್ಲೆಯಲ್ಲಿ ಶಾ ಚುನಾವಣಾ ಅಲೆ ಸೃಷ್ಟಿ ಮಾಡುತ್ತಾರೆ ಎಂದರು.

ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂದೇಶ್ ಶೆಟ್ಟಿ ಮಾತನಾಡಿ ಕೆಂಜಾರು ಜಂಕ್ಷನ್ ನಲ್ಲಿ ಸಾವಿರಾರು ಜನ ಅಮಿತ್ ಶಾ ಮಾತು ಕೇಳಲು ಕಾತುರರಾಗಿದ್ದರು. ಶಾ ಅವರಿಗೆ ಅನಾರೋಗ್ಯ ಇರೊದ್ರಿಂದ ಅವರು ಮಾತನಾಡಲಿಲ್ಲ. ಗಂಟಲು ಸಮಸ್ಯೆಯಿಂದ ಬಳಲುತ್ತಿರುವ ಶಾ ಸುಧಾರಿಸಿಕೊಂಡು ನಾಳೆಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ 13 ಕ್ಕೂ ಹೆಚ್ಚು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

Comments

Leave a Reply

Your email address will not be published. Required fields are marked *