#justasking ಎನ್ನುತ್ತಲೇ ಜಗ್ಗೇಶ್‍ಗೆ ಉತ್ತರ ಕೊಟ್ಟ ಪ್ರಕಾಶ್ ರೈ!

ಬೆಂಗಳೂರು: ಯಾಕೋ ಜಗ್ಗೇಶ್ ಮಾತಾಡಿದ್ದೆಲ್ಲ ವಿವಾದವಾಗುತ್ತಿದೆಯಾ? ಅಥವಾ ವಿವಾದ ಸೃಷ್ಟಿಸಲೆಂದೇ ಮಾತಾಡುತ್ತಿದ್ದಾರಾ ಗೊತ್ತಿಲ್ಲ. ಇಷ್ಟು ದಿನ ರಮ್ಯಾ ವಿರುದ್ಧ ಟ್ವೀಟ್ ವಾರ್ ನಡೆಸುತ್ತಿದ್ದ ಜಗ್ಗೇಶ್ ಈಗ ಪ್ರಕಾಶ್ ರೈ ವಿರುದ್ಧ ಹರಿಹಾಯ್ದಿದ್ದಾರೆ.

ಟ್ವಿಟ್ಟರ್ ನಲ್ಲಿ ಜಗ್ಗೇಶ್ ಬರೆದಿದ್ದೇನು?: `ತಮಗೆ ಅರ್ಹತೆ ಏನಿದೆ? ರಾಜಕೀಯದ ಅನುಭವ ಇಲ್ಲ. ಕಾನೂನು ವಿದ್ಯಾರ್ಥಿಯೇ ಅಲ್ಲ. ಗ್ರಾಮ, ಜಿಲ್ಲಾ, ತಾಲ್ಲೂಕು, ಪಂಚಾಯ್ತಿ ಮತಗಟ್ಟೆ, ಸಂಘಟನೆ, ಸ್ಪರ್ಧೆ, ವಿಧಾನಸೌಧ, ಲೋಕಸಭೆ ಪರಿಚಯ, ಇಲಾಖೆ ಮಾಹಿತಿ? ಅದೃಷ್ಟ ಪ್ರತಿಭೆ ಇತ್ತು ಬಿಡುವಿಲ್ಲದ ನಟನಾದೆ! ಈಗ? ಇಷ್ಟುದಿನ ತಮಿಳು ನಟನಾಗಿ ಕನ್ನಡಕ್ಕೆ ಸೊಲ್ಲಡಗಿತ್ತು! ಈಗ ಯಾಕೆ ಪೌರುಷ? ಪ್ರಚಾರ ತಾನೆ? ವ್ಯರ್ಥ ಬದುಕು? ತಮ್ಮನ್ನ ಆರಂಭದಿಂದ ನೋಡಿರುವೆ. ನೆನಪಿದೆಯ ನಿಮ್ಮ ನಮ್ಮ ಪಯಣ ರಾಜಕಿಶೋರ್ ಜೊತೆ ಮೈಸೂರು ಜೈಲಿಂದ. ನಾನು ಮರೆತಿಲ್ಲ. ಹೆಮ್ಮೆಪಟ್ಟೆ ನಿಮ್ಮ ಬೆಳವಣಿಗೆಗೆ. ರಾತ್ರೋರಾತ್ರಿ ರಾಷ್ಟ್ರ ನಾಯಕನಾಗಲು ಮೋದಿ ತೆಗಳಲು ಆಯ್ಕೆ. ಅದ್ಭುತ ನಾಟಕ. ನೆನಪಿಡಿ ಮೋದಿ ಬಗ್ಗೆ ಮಾತಾಡಿದ್ದಕ್ಕೆ ತಮಗೆ ವೇದಿಕೆ ಸಿಗುತ್ತಿದೆ. ಅಲ್ಲಿಗೆ ನೋಡಿ ಮೋದಿ ಹವಾ! ಅಸಹ್ಯ ನಿಮ್ಮ ವಾಮಗುಣ! ಸಂವಿಧಾನದಲ್ಲಿ ಪ್ರತಿ ಪ್ರಜೆಗೆ ಮಾತಾಡುವ ಹಕ್ಕಿದೆ. ಮಾತಾಡಿ ಆದರೆ, ಪ್ರಚಾರಕ್ಕೆ ಕೈ ನಾಯಕರ ಶಹಭಾಸ್ ಗಿರಿಗೆ ಬೇಕಿತ್ತ ಇಷ್ಟು ತಳಮಟ್ಟದ ನಡೆ? ಮೋದಿ ತೆಗಳಿ ಯಾರೋ ಏನೋ ಆದರು ಅಂತಾ ಅವರ ಸಾಲಲ್ಲಿ ನಿಂತು ಯಾಕೆ ಚಪ್ಪಾಳೆ ತಿಪ್ಪೆ ಸೇರಿಸುತ್ತೀರಿ? ನಿಲ್ಲಿ ಚುನಾವಣೆಗೆ ತಟ್ಟಿ ತೊಡೆ ಅದು ಗಂಡಸುತನ. ಯಾಕೆ ಚುನಾವಣೆ ವಸ್ತಿಲಲ್ಲಿ ಈ ಡ್ರಾಮಾ ಕಂಪನಿ?’ ಎಂದು ಸುದೀರ್ಘವಾಗಿ ತಮ್ಮದೇ ಟಿಪಿಕಲ್ ಭಾಷೆಯಲ್ಲಿ ಟ್ವೀಟ್ ಮಾಡಿ ಪ್ರಕಾಶ್ ರೈಗೆ ಲೆಫ್ಟ್ ರೈಟ್ ತೆಗೆದುಕೊಂಡಿದ್ದಾರೆ.

 

ಪ್ರಸ್ತುತ ಜಗ್ಗೇಶ್ ಅವರ ಸುದೀರ್ಘ ಟ್ವೀಟ್ ಗೆ ಒಂದೊಂದಾಗಿ ಉತ್ತರಿಸಿರುವ ರೈ, `ನಾನು ಮೋದಿ ಅವರನ್ನು ಪ್ರಶ್ನಿಸುವುದು ಪ್ರಚಾರಕ್ಕಾಗಿಯೋ. ಹಣಕ್ಕಾಗಿಯೋ. ಹೆಸರಿಗಾಗಿಯೋ ಅಲ್ಲ. ಅವನ್ನು ಈಗಾಗಲೇ ಜನ ಕೊಟ್ಟಿದ್ದಾರೆ’ ಎಂದು ಟಾಂಗ್ ನೀಡಿದ್ದಾರೆ.

`ರಾಜಕೀಯ ಕಬಡ್ಡಿ ಆಟವಲ್ಲ. ಗೆದ್ದು ತೊಡೆ ತಟ್ಟಲು. ತೊಡೆ ತಟ್ಟುವುದು ಗಂಡಸುತನ ಎನ್ನುವ ನಿಮ್ಮ ಮನಸು, ಮಾತು ಸರಿಯಲ್ಲ. ಅಸಭ್ಯವಾಗಿದೆ. ತಾವು ಕಲಾವಿದರು, ದಯವಿಟ್ಟು ಬಳಸುವ ಮಾತಿನ ಮೇಲೆ ಸ್ವಲ್ಪ ಹಿಡಿತವಿರಲಿ’ ಎಂದು ಎಚ್ಚರಿಸಿದ್ದಾರೆ.

ಕೋಮುವಾದವನ್ನು ಖಂಡಿಸುವುದಕ್ಕೆ, ಸೊಂಟದ ಕೆಳಗಿನ ಅಸಭ್ಯ ಮಾತನಾಡುವ ನಿಮ್ಮ ಪಕ್ಷದ ಸದಸ್ಯರನ್ನ, ಇಂಥಹ ನಾಯಕರನ್ನು ಕಾಪಾಡುವ ನಿಮ್ಮ ಪಕ್ಷವನ್ನು ಹಾಗೂ ನಾಯಕರನ್ನು ಪ್ರಶ್ನಿಸಲು ಮನುಷ್ಯರನ್ನು ಮನುಷ್ಯರನ್ನಾಗಿ ನೋಡುವ ಮಾನವೀಯ ಹೃದಯವೊಂದಿದ್ದರೆ ಸಾಕು. ಇದಕ್ಕೇ ಯಾವುದೇ ಅರ್ಹತೆಗಳೂ ಬೇಕಿಲ್ಲ ಎಂದು ಉತ್ತರಿಸಿದ್ದಾರೆ.

Comments

Leave a Reply

Your email address will not be published. Required fields are marked *