ಟೆರೇಸ್ ಮೇಲೆ ಮಗುವಿನ ರುಂಡ ಪತ್ತೆ ಪ್ರಕರಣ – ಶಿಶು ಬಲಿ ನೀಡಿದ್ದು ಈ ಕಾರಣಕ್ಕೆ

ಹೈದರಾಬಾದ್: ಅಪರಿಚಿತ ಮಗುವಿನ ರುಂಡ ಮನೆಯ ಟೆರೇಸ್ ಮೇಲೆ ಪತ್ತೆಯಾದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಇದು ಮಾನವ ಬಲಿ ಎಂದು ರಾಚಕೊಂಡ ಪೊಲೀಸರು ದೃಢಪಡಿಸಿದ್ದಾರೆ.

ಫೆಬ್ರವರಿ 1ರಂದು ಇಲ್ಲಿನ ಉಪ್ಪಲ್ ಪ್ರದೇಶದ ಮನೆಯೊಂದರ ಮಹಡಿಯ ಮೇಲೆ ಮಗುವಿನ ರುಂಡ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 40 ವರ್ಷದ ಕ್ಯಾಬ್ ಚಾಲಕ ಕೆ. ರಾಜಶೇಖರ್ ಹಾಗೂ ಆತನ ಪತ್ನಿ ಶ್ರೀಲತಾ(35) ಳನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ. ಆರೋಪಿ ರಾಜಶೇಖರ್ ನ ಪತ್ನಿಗೆ ದೀರ್ಘಕಾಲದ ಅನಾರೋಗ್ಯ ಇದ್ದು, ಅದನ್ನ ವಾಸಿ ಮಾಡಲು ನರಬಲಿ ಕೊಡಬೇಕು ಎಂದು ಯಾರೋ ಹೇಳಿದ್ದರಿಂದ ಈ ಕೃತ್ಯವೆಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಅನಾಥ ಹೆಣ್ಣುಮಗು ಕಿಡ್ನಾಪ್: ರಾಜಶೇಖರ್ ಜನವರಿ 31ರಂದು ಬೋಯಗುಡ ಪ್ರದೇಶದಲ್ಲಿ ರಸ್ತೆಬದಿಯಿಂದ 3 ತಿಂಗಳ ಅನಾಥ ಹೆಣ್ಣುಮಗುವನ್ನ ಅಪಹರಿಸಿಕೊಂಡು ಬಂದಿದ್ದ ಎಂದು ರಾಚಕೊಂಡ ಪೊಲೀಸ್ ಆಯುಕ್ತರಾದ ಮಹೇಶ್ ಎಂ ಭಾಗ್ವತ್ ಹೇಳಿದ್ದಾರೆ.

ಮಗುವಿನ ದೇಹ, ಚಾಕುವನ್ನ ನದಿಗೆ ಎಸೆದಿದ್ದ: ರಾಜಶೇಖರ್ ಮಧ್ಯರಾತ್ರಿ ಮಗುವಿನ ರುಂಡ ಕಡಿದು, ಅದರ ದೇಹ ಮತ್ತು ಕೃತ್ಯಕ್ಕೆ ಬಳಸಿದ ಚಾಕುವನ್ನ ನದಿಗೆ ಎಸೆದಿದ್ದ. ನಂತರ ತನ್ನ ಹೆಂಡತಿ ಶ್ರೀಲತಾ ಜೊತೆಗೂಡಿ ಚಿಲುಕನಗರದ ತನ್ನ ಮನೆಯಲ್ಲಿ ಮಗುವಿನ ರುಂಡವನ್ನ ಇಟ್ಟು ಕ್ಷುದ್ರ ಪೂಜೆ ಕೈಗೊಂಡಿದ್ದ. ನಂತರ ತನಗೆ ಹೇಳಿದಂತೆ ಮಗುವಿನ ರುಂಡವನ್ನ ಮನೆಯ ಟೆರೇಸ್ ಮೇಲೆ ನೈಋತ್ಯ ಭಾಗದಲ್ಲಿ ಇಟ್ಟು ಚಂದ್ರಗ್ರಹಣದ ಬೆಳಕು ಹಾಗೂ ಬೆಳಗ್ಗೆ ಸುಮಾರು 4 ಗಂಟೆಯ ಸೂರ್ಯೋದಯದ ಬೆಳಕು ಅದರ ಮೇಲೆ ಬೀಳುವಂತೆ ಇಟ್ಟಿದ್ದ ಎಂದು ಮಹೇಶ್ ತಿಳಿಸಿದ್ದಾರೆ.

ಜನವರಿ 31ರಂದು ಸಂಪೂರ್ಣ ಚಂದ್ರಗ್ರಹಣ ಸಂಭವಿಸಿತ್ತು. ಮರುದಿನ ಬೆಳಗ್ಗೆ ರಾಜಶೇಖರ್ ಎಂದಿನಂತೆ ಕೆಲಸಕ್ಕೆ ಹೋಗಿದ್ದ. ಆದ್ರೆ ಆತನ ಅತ್ತೆ ಬೆಳಗ್ಗೆ 11 ಗಂಟೆ ವೇಳೆಯಲ್ಲಿ ಮಗುವಿನ ರುಂಡವನ್ನ ನೋಡಿ ಕಿರುಚಿಕೊಂಡಾಗ ಎಲ್ಲರಿಗೂ ವಿಚಾರ ಗೊತ್ತಾಗಿ, ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.

ಪ್ರಕರಣದ ತನಿಖೆ ವೇಳೆ 122 ಮೊಬೈಲ್ ಕಾಲ್ ರೆಕಾಡ್ರ್ಸ್ ಪರಿಶೀಲಿಸಲಾಗಿತ್ತು, 45 ಜನರನ್ನ ವಿಚಾರಣೆಗೊಳಪಡಿಸಿ 100ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನ ತಪಾಸಣೆ ಮಾಡಲಾಗಿತ್ತು ಎಂದು ಮಹೇಶ್ ಹೇಳಿದ್ದಾರೆ.

ರಾಜಶೇಖರ್ ಮನೆಯಲ್ಲಿ ರಕ್ತದ ಕಲೆಗಳು ಪತ್ತೆಯಾಗಿದ್ದು, ಟೆರೇಸ್ ಮೇಲೆ ಪತ್ತೆಯಾದ ಮಗುವಿನ ರುಂಡದ ಡಿಎನ್‍ಎ ಮಾದರಿ ಜೊತೆ ಹೊಂದಾಣಿಕೆ ಇರುವುದು ವಿಧಿವಿಜ್ಞಾನ ಪರೀಕ್ಷೆಯ ವರದಿಯಿಂದ ತಿಳಿದುಬಂದಿತ್ತು. ಹೀಗಾಗಿ ಪೊಲೀಸರು ವಿಚಾರಣೆ ಮಾಡಿದಾಗ ರಾಜಶೇಖರ್ ತನ್ನ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ.

ದುಷ್ಟಶಕ್ತಿ ಓಡಿಸಲು ನರಬಲಿ ಕೊಟ್ರಂತೆ: ಆರೋಪಿ ರಾಜಶೇಖರ್ ಪತ್ನಿಯ ಕಾಯಿಲೆ ಗುಣಪಡಿಸಲು 4 ವರ್ಷದಿಂದ ವೈದ್ಯರು, ಜ್ಯೋತಿಷಿಗಳು ಹಾಗೂ ಮಾಂತ್ರಿಕರನ್ನ ಸಂಪರ್ಕಿಸಿದ್ದ. ಇತ್ತೀಚೆಗೆ ಸಮ್ಮಕ್ಕ ಸರಳಮ್ಮ ಜಾತ್ರೆಗೆ ಹೋದಾಗ ಬುಡಕಟ್ಟು ವ್ಯಕ್ತಿಯೊಬ್ಬರನ್ನ ಭೇಟಿಯಾಗಿದ್ದ. ಆಗ ಅವರು, ಮನೆಯಲ್ಲಿ ದುಷ್ಟಶಕ್ತಿ ಇದೆ. ಪತ್ನಿಯ ಕಾಯಿಲೆ ವಾಸಿ ಮಾಡಲು ಮಗುವನ್ನ ಬಲಿ ಕೊಡಬೇಕೆಂದು ಹೇಳಿದ್ದರು. ವಾಪಸ್ ಬಂದ ನಂತರ ರಾಜಶೇಖರ್ ಮೂವರು ಮಾಂತ್ರಿಕರನ್ನ ಭೇಟಿಯಾಗಿದ್ದ. ಅವರು ಕೆಲವು ಪೂಜೆಗಳನ್ನ ಮಾಡಿದ್ದರೂ ಪತ್ನಿಯ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಹೀಗಾಗಿ ದಂಪತಿ ನರಬಲಿ ಕೊಡಲು ನಿರ್ಧರಿಸಿದ್ದರು.

ಶ್ರೀಲತಾ ಕಳೆದ 4 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಳು. ಹೀಗಾಗಿ ಅಕೆಯಿಂದ ದುಷ್ಟಶಕ್ತಿಗಳನ್ನ ದೂರ ಮಾಡಲು ಹೆಣ್ಣುಮಗುವನ್ನ ತಂದು ನರ ಬಲಿ ಕೊಡುವಂತೆ ಯಾರೋ ಸಲಹೆ ನೀಡಿದ್ದರು ಎಂದು ರಾಜಶೇಖರ್ ಪೊಲೀಸರಿಗೆ ಹೇಳಿದ್ದಾನೆ.

ಅನಾಥ ಮಗುವನ್ನ ಅಪಹರಣ ಮಾಡಿದ್ರೆ ಅದು ಕಾಣೆಯಾದ್ರೂ ಯಾರಿಗೂ ಗೊತ್ತಾಗುವುದಿಲ್ಲ ಎಂದುಕೊಂಡು ರಾಜಶೇಖರ್ ಅನಾಥ ಮಗುವನ್ನೇ ಹುಡುಕಲು ನಿರ್ಧರಿಸಿದ್ದ ಎಂದು ಆಯುಕ್ತರಾದ ಮಹೇಶ್ ಹೇಳಿದ್ದಾರೆ.

ಆರೋಪಿಗಳ ವಿರುದ್ಧ ಕೊಲೆ, ಅಪಹರಣ ಹಾಗೂ ಐಪಿಸಿ ಸೆಕ್ಷನ್ ನ ಇನ್ನಿತರೆ ಸಂಬಂಧಿತ ಕಾಯ್ದೆಗಳಡಿ ಪ್ರಕರಣ ದಾಖಲಾಗಿದೆ. ಮೃತ ಮಗುವಿನ ಗುರುತು ಪತ್ತೆಹಚ್ಚಲು ಮುಂದೆ ಬರುವಂತೆ ಜನರನ್ನು ಭಾಗ್ವತ್ ಮನವಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *