ಸೀರೆಯಲ್ಲಿ ಸ್ಕೈ ಡೈವಿಂಗ್ ಮಾಡಿ ದಾಖಲೆ ಬರೆದ ಮಹಿಳೆ

ಮುಂಬೈ: ಮಹಾರಾಷ್ಟ್ರ ರಾಜ್ಯದ ಪುಣೆಯ ಸಾಹಸಿ ಮಹಿಳೆ ಶೀತಲ್ ರಾಣೆ-ಮಹಾಜನ್, ಥೈಲ್ಯಾಂಡ್‍ನಲ್ಲಿ ‘ನವ್ ವಾರಿ ಸೀರೆ’ (8.25 ಮೀಟರ್ ಉದ್ದದ ಸೀರೆ) ಧರಿಸಿ ಸ್ಕೈ ಡೈವಿಂಗ್ ಮಾಡುವ ಮೂಲಕ ಹೊಸ ದಾಖಲೆಯನ್ನು ಬರೆದಿದ್ದಾರೆ. ಸೀರೆ ಧರಿಸಿ ಸ್ಕೈ ಡೈವಿಂಗ್ ಮಾಡಿದ ಮೊದಲ ಭಾರತೀಯ ಮಹಿಳೆ ಎಂಬ ಬಿರುದಿಗೆ ಶೀತಲ್ ಪಾತ್ರವಾಗಿದ್ದಾರೆ.

ಸ್ಕೈ ಡೈವಿಂಗ್ ಬಳಿಕ ಮಾತನಾಡಿದ ಶೀತಲ್, ಅನಕೂಲಕರವಾದ ವಾತಾವರಣ ಇದ್ದ ಕಾರಣ ಪಟ್ಟಾಯ್‍ನ ವಿಶ್ವ ಪ್ರಸಿದ್ಧ ರೆಸಾರ್ಟ್ ಮೇಲಿಂದ ಸುಮಾರು 13,000 ಅಡಿ ಎತ್ತರದಿಂದ ಎರಡು ಬಾರಿ ಸ್ಕೈ ಡೈವಿಂಗ್ ಮಾಡಿದೆ ಎಂದು ತಮ್ಮ ಸಂತೋಷವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.

ಮಾರ್ಚ್ 8 ಅಂತರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆಯಲ್ಲಿ ಈ ಬಾರಿ ಏನಾದ್ರೂ ಸಾಹಸ ಮಾಡಬೇಕೆಂದು ಯೋಚಿಸಿ, ನವ್ ವಾರಿ ಸೀರೆ ಧರಿಸಿ ಸ್ಕೈ ಡೈವಿಂಗ್ ಮಾಡಲು ತೀರ್ಮಾನಿಸಿದೆ ಅಂತಾ ತಿಳಿಸಿದ್ದಾರೆ.

ಭಾರತೀಯ ಮಹಿಳೆಯರು ಧರಿಸುವ ಸಾಮಾನ್ಯ ಸೀರೆಗಿಂತ್ ‘ನವ್ ವಾರಿ ಸೀರೆ’ ತುಂಬಾ ಉದ್ದವಾಗಿರುತ್ತದೆ. ಮೊದಲು ಸರಿಯಾಗಿ ಸೀರೆಯನ್ನು ತೊಟ್ಟು ರೆಡಿಯಾದೆ. ನಂತರ ಪ್ಯಾರಾಚೂಟ್, ಹ್ಯಾಂಡ್ ಗ್ಲೌಸ್, ಹೆಲ್ಮೆಟ್, ಸಂಪರ್ಕ ಸಾಧನ ಮತ್ತು ಶೂಗಳನ್ನು ಧರಿಸಿ ಸ್ಕೈ ಡೈವಿಂಗ್ ಮಾಡಿದೆ. ಮೊದಲ ಬಾರಿಗೆ ಧುಮುಕುವಾಗ ಸ್ವಲ್ಪ ಭಯವಾಗಿತ್ತು, ಆದ್ರೆ ಎರಡನೇ ಬಾರಿಗೆ ಧೈರ್ಯದಿಂದ ಧುಮುಕಿ ಎಂಜಾಯ್ ಮಾಡಿದೆ ಅಂತಾ ಶೀತಲ್ ಹೇಳಿಕೊಂಡಿದ್ದಾರೆ.

ಪದ್ಮಶ್ರೀ ಪ್ರಶಸ್ತಿ ವಿಜೇತೆಯಾಗಿರುವ ಶೀತಲ್ ಮಹಾಜನ್ ಫಿನ್‍ಲ್ಯಾಂಡ್ ಮೂಲದ ಎಂಜಿನಿಯರ್ ವೈಭವ್ ರಾಣೆ ಅವರನ್ನು ಮದುವೆ ಆಗಿದ್ದಾರೆ. 2008ರಲ್ಲಿ ಪುಣೆ ನಗರದ ಸ್ಕೈ ಸಿಟಿಯಲ್ಲಿ 750 ಅಡಿ ಎತ್ತರದಲ್ಲಿ ಹಾಟ್ ಏರ್ ಬಲೂನ್‍ನಲ್ಲಿ ಮದುವೆಯಾಗುವ ಮೂಲಕ ರಾಷ್ಟ್ರೀಯ ದಾಖಲೆ ಬರೆದಿದ್ದರು.

ಏಪ್ರಿಲ್ 18, 2004ರಲ್ಲಿ ತಮ್ಮ ಮೊದಲ ಸ್ಕೈ ಡೈವಿಂಗ್ ನಲ್ಲಿ ರಷ್ಯಾದಲ್ಲಿರುವ ಉತ್ತರ ದ್ರುವದಲ್ಲಿ ಮೈನಸ್ 37 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ 2,400 ಅಡಿ ಎತ್ತರದಿಂದ ಧುಮಕಿದ ವಿಶ್ವದ ಮೊದಲ ಮಹಿಳೆ ಎಂಬ ದಾಖಲೆ ಶೀತಲ್ ಹೆಸರಿನಲ್ಲಿದೆ. ಇದೂವರೆಗೂ ಸ್ಕೈ ಡೈವಿಂಗ್ ನಲ್ಲಿ 18 ರಾಷ್ಟ್ರೀಯ ರೆಕಾರ್ಡ್ ಬರೆದಿದ್ದಾರೆ.

Comments

Leave a Reply

Your email address will not be published. Required fields are marked *