1 ವಾರದಲ್ಲಿ ಗೀತಾ ಮಹಾದೇವಪ್ರಸಾದ್‍ರಿಂದ 60ಕ್ಕೂ ಹೆಚ್ಚು ಕಾಮಗಾರಿಗಳಿಗೆ ಗುದ್ದಲಿ ಪೂಜೆ!

ಚಾಮರಾಜನಗರ: ಚುನಾವಣೆ ಸಮೀಪಿಸುತ್ತಿದ್ದಂತೆ ಶಾಸಕರುಗಳಿಗೆ ಹಾಗೂ ಸಚಿವರುಗಳಿಗೆ ತಮ್ಮ ಕ್ಷೇತ್ರದ ಮೇಲೆ ಎಲ್ಲಿಲ್ಲದ ಒಲವು ಬರುತ್ತಿದ್ದು, ಅನೇಕ ಕಾಮಗಾರಿಗಳಿಗೆ ಚಾಲನೆ ಸಿಗುತ್ತಿದೆ.

ಗುಂಡ್ಲುಪೇಟೆ ಕ್ಷೇತ್ರದ ಶಾಸಕಿ, ಸಣ್ಣ ಕೈಗಾರಿಕೆ ಮತ್ತು ಸಕ್ಕರೆ ಖಾತೆಯ ಸಚಿವೆ ಗೀತಾ ಮಹದೇವಪ್ರಸಾದ್ ಅವರು ತಮ್ಮ ಕ್ಷೇತ್ರದ ಮೇಲೆ ಯಾವತ್ತೂ ಇರದ ಒಲವನ್ನು ಈಗ ತೋರಿಸುತ್ತಿದ್ದಾರೆ. ಕಳೆದ ಒಂದೇ ವಾರದಲ್ಲಿ ಸುಮಾರು 60ಕ್ಕೂ ಹೆಚ್ಚು ಗುದ್ದಲಿ ಪೂಜೆ ಮಾಡಿದ್ದಾರೆ. ಈ ಹಿಂದೆ ಈ ಕ್ಷೇತ್ರದಲ್ಲಿ ಇಷ್ಟು ಕಡಿಮೆ ಸಮಯದಲ್ಲಿ ಇಷ್ಟೊಂದು ಕಾಮಗಾರಿಗಳಿಗೆ ಚಾಲನೆ ಸಿಕ್ಕಿರಲಿಲ್ಲ.

ಗುಂಡ್ಲುಪೇಟೆ ಕ್ಷೇತ್ರದ ವ್ಯಾಪ್ತಿಯಲ್ಲಿ ಒಳಚರಂಡಿ, ರಸ್ತೆ, ಸಮುದಾಯ ಭವನ ಸೇರಿದಂತೆ ಇನ್ನಿತರ ಕಾಮಗಾರಿಗಳಿಗೆ ಒಂದೇ ವಾರದಲ್ಲಿ 60 ಗುದ್ದಲಿ ಪೂಜೆ ನೇರವೇರಿಸಿದ್ದಾರೆ. ಚುನಾವಣೆಯಲ್ಲಿ ಗೆದ್ದು ಸುಮಾರು 8 ತಿಂಗಳಾದರೂ ತಮ್ಮ ಕ್ಷೇತ್ರದಲ್ಲಿ ಸಂಚಾರ ಮಾಡದ ಗೀತಾ ಮಹದೇವ ಪ್ರಸಾದ್ ಈಗ ಚುನಾವಣೆ ಸಮೀಪಿಸಿದಂತೆ ಗ್ರಾಮಗಳಿಗೆ ಭೇಟಿ ನೀಡಿದ್ದಕ್ಕೆ ಜನರಿಂದ ಅಸಮಾಧಾನ ವ್ಯಕ್ತವಾಗಿದೆ.

ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿ ಆತುರಾತುರವಾಗಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಚಾಲನೆ ನೀಡಿರುವ ಈ ಕಾಮಗಾರಿಗಳು ಗುಣಮಟ್ಟ ಹೇಗಿರುತ್ತದೆ ಎಂದು ಗುಂಡ್ಲುಪೇಟೆ ಕ್ಷೇತ್ರದ ಜನರು ಪ್ರಶ್ನೆ ಕೇಳುತ್ತಿದ್ದಾರೆ.

Comments

Leave a Reply

Your email address will not be published. Required fields are marked *