ಹಣ ಕೊಡಲು ನಿರಾಕರಿಸಿದ ಪೊಲೀಸಪ್ಪನಿಗೇ ಬಿತ್ತು ಗೂಸಾ!

ಮುಂಬೈ: ಮದ್ಯಪಾನ ಮಾಡಿದ್ದ ಸ್ಥಳೀಯ ಯುವಕರು ಹಣ ಕೇಳಿದಾಗ ಕೊಡಲು ನಿರಾಕರಿಸಿದ ಪೇದೆಯನ್ನು ಚೆನ್ನಾಗಿ ಥಳಿಸಿ, ಗಂಭೀರ ಗಾಯಗೊಳಿಸಿದ ಘಟನೆ ಮುಂಬೈನ ಶುಭಾಸ್ ನಗರದಲ್ಲಿ ನಡೆದಿದೆ.

ಘಟನೆಯಲ್ಲಿ ಗಾಯಗೊಂಡ ಪೇದೆಯನ್ನು ಶ್ರೀಕಾಂತ್ ತೊರಟ್ ಎಂದು ಗುರುತಿಸಲಾಗಿದೆ. ಸದ್ಯ ಇವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಏನಿದು ಘಟನೆ: ಪೇದೆ ಶ್ರೀಕಾಂತ್ ಎಂದಿನಂತೆ ತಮ್ಮ ಕೆಲಸ ಮುಗಿಸಿ ನಹರ್ ಅಲ್ಲಿರೋ ತಮ್ಮ ಮನೆಗೆ ವಾಪಾಸ್ಸಾಗುತ್ತಿದ್ದ ಸಂದರ್ಭದಲ್ಲಿ ಮೂವರು ವ್ಯಕ್ತಿಗಳು ಅವರನ್ನು ಅಡ್ಡಹಾಕಿದ್ದಾರೆ. ಅಲ್ಲದೇ ನಿನ್ನ ಕೈಯಲ್ಲಿ ಎಷ್ಟು ಹಣವಿದೆಯೋ ಅವೆಲ್ಲವನ್ನು ಕೊಡುವಂತೆ ಬೆದರಿಸಿದ್ದಾರೆ. ಇದರಿಂದ ಭಯಗೊಂಡ ಶ್ರೀಕಾಂತ್ ಕೂಡಲೇ ಕಂಟ್ರೋಲ್ ರೂಮ್ ಗೆ ಕರೆ ಮಾಡಲು ಪ್ರಯತ್ನಿಸಿದ್ದಾರೆ. ಈ ವೇಳೆ ಮೂವರು ಯುವಕರು ಕರೆ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ತಾವು ಥಳಿಸಿರೋದು ಓರ್ವ ಪೇದೆಗೆ ಅನ್ನೋದು ತಿಳಿಯುತ್ತದೆ. ಕೂಡಲೇ ಅಲ್ಲಿಂದ ಯುವಕರು ಕಾಲ್ಕಿತ್ತಿದ್ದಾರೆ. ಘಟನೆಯಿಂದ ಕಾಲಿಗೆ ಗಾಯಗಳಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದ ಪೇದೆಯನ್ನು ಅಲ್ಲೇ ಇದ್ದ ಸ್ಥಳೀಯರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆರೋಪಿಗಳು ಅರೆಸ್ಟ್: ಘಟನೆಗೆ ಸಂಬಂಧಿಸಿದಂತೆ ಕೂಡಲೇ ಎಚ್ಚೆತ್ತ ಪೊಲೀಸರು ತಂಡಗಳನ್ನು ರಚಿಸಿ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿಗಳ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಈಗಾಗಲೇ ಅವರನ್ನು ಬಂಧಿಸಲಾಗಿದ್ದು,ಆಸೀಫ್ ಶೈಕ್, ರಾಹುಲ್ ಭೋಸಲೆ ಹಾಗೂ ಕಿಶೋರ್ ರಾವತ್ ಎಂದು ಗುರುತಿಸಲಾಗಿದೆ. ಈ ಮೂವರು ಒಂದೇ ಕಡೆ ವಾಸಿಸುತ್ತಿದ್ದು, ಮದ್ಯವ್ಯಸನಿಗಳಾಗಿದ್ದಾರೆ. ಆರೋಪಿಗಳು ಹಣ ಕೇಳಿದಾಗ ಕೊಡಲು ನಿರಾಕರಿಸಿದ್ದಕ್ಕೆ ಪೇದೆಯ ಕೈ, ಕಾಲುಗಳಿಗೆ ಗಂಭೀರ ಗಾಯಗೊಳಿಸಿದ್ದಾರೆ ಅಂತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

Comments

Leave a Reply

Your email address will not be published. Required fields are marked *