ಏರ್ ಪೋರ್ಟ್ ನಲ್ಲಿ ಕಳೆದುಹೋದ ಬೆಕ್ಕಿಗಾಗಿ 3 ದಿನಗಳಿಂದ ದಂಪತಿ ಹುಡುಕಾಟ!

ಮುಂಬೈ: ನಾವು ತುಂಬಾ ಇಷ್ಟಪಟ್ಟ ಯಾವುದೇ ವಸ್ತುವನ್ನು ಕಳೆದುಕೊಂಡ್ರೆ ಬೇಜಾರಾಗತ್ತೆ. ಅದರಲ್ಲೂ ಬೆಕ್ಕು, ನಾಯಿಗಳನ್ನು ಕಳೆದುಕೊಂಡಾಗ ಆಗೋ ನೋವು ಕಳೆದುಕೊಂಡವರಿಗೆ ಗೊತ್ತು. ಹಾಗೆ ಇಲ್ಲೊಬ್ಬ ದಂಪತಿ ತಾವು ಕಳೆದುಕೊಂಡಿರೋ ಬೆಕ್ಕಿಗಾಗಿ ಮೂರು ದಿನಗಳಿಂದ ಹುಡುಕಾಟ ನಡೆಸುತ್ತಿದ್ದಾರೆ ಅಂದ್ರೆ ನೀವು ನಂಬಲೇಬೇಕು.

ಆತಿಶಾ ಪೆಂಜೋರ್ ಭುಟಿಯಾ(28) ಹಾಗೂ ಶೃತಿ ಮೆನನ್(28) ದಂಪತಿ ಮುಂಬೈನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲು ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್ 2ಕ್ಕೆ ಬಂದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ದಂಪತಿ ಫೆಬ್ರವರಿ 5ರಂದು 8.15ಕ್ಕೆ ಹೊರಡುವ ಏರ್ ಇಂಡಿಯಾ ವಿಮಾನ ನಂಬರ್ AI609 ದಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಲೆಂದು ಇವಾಲೂನಾ ಮತ್ತು ಓಸ್ಗಾಟ್ ಎಂಬ ತಮ್ಮ ಎರಡು ಮುದ್ದಿನ ಬೆಕ್ಕುಗಳೊಂದಿಗೆ ಏರ್‍ಪೋರ್ಟ್ ಗೆ ಬಂದಿದ್ದಾರೆ. ಈ ವೇಳೆ ಎರಡರಲ್ಲಿ ಒಂದು ಬೆಕ್ಕು ಕಾಣೆಯಾಗಿದೆ.

ನಾವು ಪಂಜರವೊಂದರಲ್ಲಿ ಬೆಕ್ಕುಗಳನ್ನು ಹಾಕಿ ತಂದಿದ್ದೆವು. ಆದ್ರೆ ಕೌಂಟರ್ ನಲ್ಲಿ ಕುಳಿತಿದ್ದವರು 5 ಕೆ.ಜಿಗಿಂತ ಜಾಸ್ತಿ ತೂಕವಿದ್ದ ಸಾಕುಪ್ರಾಣಿಗಳನ್ನು ಕರೆದೊಯ್ಯುವಂತಿಲ್ಲ ಎಂದು ತಿಳಿಸಿದ್ರು. ಇದಕ್ಕೂ ಮೊದಲು ನಾವು ಅಲ್ಲಿಗೆ ಕರೆ ಮಾಡಿ ವಿಚಾರಿಸಿದಾಗ ಅಲ್ಲಿನ ಅಧಿಕಾರಿಗಳು ಒಬ್ಬ ವ್ಯಕ್ತಿ 7 ಕೆ.ಜಿ ತೂಕದ ಪ್ರಾಣಿಯನ್ನ ಒಯ್ಯಬಹುದು ಎಂದಿದ್ದರು. ನಂತರ ನಾವು ಎಲ್ಲಾ ಅಗತ್ಯ ಪ್ರಕ್ರಿಯೆಗಳನ್ನ ಮುಗಿಸಿ ವಿಮಾನವೇರಲು ಹೊರಟಿದ್ದೆವು.

25 ನಿಮಿಷದ ಬಳಿಕ ನಿಲ್ದಾಣದ ಗೇಟ್ ತಲುಪುತ್ತಿದ್ದಂತೆಯೇ ನಿಮ್ಮ ಒಂದು ಬೆಕ್ಕು ತಪ್ಪಿಸಿಕೊಂಡಿದೆ ಅಂತ ಏರ್ ಇಂಡಿಯಾ ಕಚೇರಿಯಿಂದ ಕರೆ ಬಂತು. ಕೂಡಲೇ ನಾನು ಶೃತಿಗೆ ಹೊರಡಲು ಹೇಳಿ ನನ್ನ ಟಿಕೆಟ್ ಕ್ಯಾನ್ಸಲ್ ಮಾಡಿ ಕೌಂಟರ್ ಬಳಿ ತೆರಳಿದೆ. ಅಲ್ಲಿಗೆ ಹೋದಾಗ ಇವಾಲೂನಾ ತನ್ನ ಪಂಜರದಿಂದ ತಪ್ಪಿಸಿಕೊಂಡು ಹೋಗಿತ್ತು. ಬೆಕ್ಕುಗಳಿದ್ದ ಪಂಜರವನ್ನು ವಿಮಾನ ನಿಲ್ದಾಣದ ಸರಕು ಸಾಗಾಟ ಮಾಡುವ ಸ್ಥಳದಲ್ಲಿಟ್ಟಿದ್ದೆವು. ನಂತರ ಸುಮಾರು 12 ಗಂಟೆಗಳ ಕಾಲ ಅಂದ್ರೆ ಬೆಳಗ್ಗೆ 6 ಗಂಟೆಯಿಂದ ಬೆಕ್ಕಿಗಾಗಿ ಹುಡುಕಾಟ ನಡೆಸಿದ್ದೆವು. ಬಳಿಕ ಈ ಕುರಿತು ಕೇಸ್ ದಾಖಲಿಸಲು ಪೊಲೀಸ್ ಠಾಣೆಗೆ ತೆರಳಿದೆವು ಅಂತ ಆತಿಶಾ ಪೆಂಜೋರ್ ಭುಟಿಯಾ ವಿವರಿಸಿದ್ರು.

ಪೊಲೀಸ್ ಠಾಣೆಯಲ್ಲಿ ಸಿಸಿಟಿವಿಗಳನ್ನು ಪರಿಶೀಲಿಸುವಂತೆ ಹೇಳಿದ್ರು. ಹೀಗಾಗಿ ನಾವು ಸಿಐಎಸ್‍ಎಫ್ ಕಂಟ್ರೋಲ್ ರೂಮ್ ಗೆ ತೆರಳಿ ಸಿಸಿಟಿವಿ ದೃಶ್ಯಾವಳಿಗಳನನ್ನು ಪರಿಶೀಲಿಸಿದೆವು. ಈ ವೇಳೆ ಪಿಕಪ್ ಟ್ರಕ್ ಅವರು ಬೆಕ್ಕುಗಳನ್ನು ಹೊತ್ತೊಯ್ಯುವ ಮುನ್ನ ಇವಾಲೂನಾ ಅವರ ಕೈಯಿಂದ ತಪ್ಪಿಸಿಕೊಂಡು ಓಡಿ ಹೋಗಿದೆ. ಈ ವೇಳೆ ಅಲ್ಲೇ ಇದ್ದ ಕೆಲ ಜನ ಬೆಕ್ಕನ್ನು ಹಿಡಿಯಲು ಅದರ ಹಿಂದೆ ಓಡಿದ್ದಾರೆ. ಆದ್ರೆ ಬೆಕ್ಕು ಅವರ ಕೈಗೆ ಸಿಗದೆ ಅಲ್ಲಿಂದ ಕಾಲ್ಕಿತ್ತಿದೆ ಎಂದು ಹೇಳಿದ್ರು.

ಮಾಲೀಕರ ತಪ್ಪು: ಇದು ಬೆಕ್ಕಿನ ಮಾಲೀಕರಿಂದಲೇ ಆಗಿರೋ ತಪ್ಪಾಗಿದೆ. ಸರಿಯಾದ ಪಂಜರದಲ್ಲಿ ಅವನ್ನ ಇಡಬೇಕಿತ್ತು. ಗುರುವಾರ ಮಧ್ಯಾಹ್ನದ ಬಳಿಕ ಬಿಎಂಎ ಸಿಬ್ಬಂದಿ ಬಳಿ ತೆರಳಿ ಪಂಜರವನ್ನು ಪರಿಶೀಲಿಸಿದೆ. ಅಲ್ಲದೇ ಬೆಕ್ಕಿನ ಬಗ್ಗೆ ನಿಗಾ ವಹಿಸುವಂತೆ ಹೇಳಿದ್ದೆ. ಆದ್ರೆ ಈವರೆಗೆ ಬೆಕ್ಕು ಪತ್ತೆಯಾಗಿಲ್ಲ ಅಂತ ಏರ್ ಇಂಡಿಯಾ ಟರ್ಮಿನಲ್ ಮ್ಯಾನೇಜರ್ ರಾಮ ಕಾಂತ್ ತಿಳಿಸಿದ್ದಾರೆ.

3 ದಿನವಾದ್ರೂ ಹುಡುಕಾಟ: ಬೆಕ್ಕು ಕಳೆದುಕೊಂಡ ಬಳಿಕ ದಂಪತಿ ಹುಡುಕಾಟ ಆರಂಭಿಸಿದ್ದು ಫೆಬ್ರವರಿ 8ರಂದು ಸುಮಾರು ಮಧ್ಯರಾತ್ರಿ 1 ಗಂಟೆಯವರೆಗೂ ತಮ್ಮ ಗೆಳೆಯರ ಜೊತೆ ಹುಡುಕಾಟ ನಡೆಸಿದ್ದಾರೆ. ಅದಕ್ಕಾಗಿ ವಿಮಾನ ನಿಲ್ದಾಣದ ಸುತ್ತಮುತ್ತ ಆಹಾರ ಮತ್ತು ಪೋಸ್ಟರ್ ಗಳನ್ನು ಅಂಟಿಸಿದ್ದೆವು. ಕೆಲ ವಿಮಾನ ನಿಲ್ದಾಣ ಸಿಬ್ಬಂದಿ ಕೆಲ ಸಮಯದ ಹಿಂದೆ ಕಸದ ರಾಶಿಯ ಹತ್ತಿರ ಬೆಕ್ಕು ಇರುವುದನ್ನು ನೋಡಿರುವುದಾಗಿ ಹೇಳಿದ್ರು ಅಂತ ಭುಟಿಯಾ ಹೇಳಿದ್ದಾರೆ. ಮೂರು ಬಾರಿ ಪಂಜರ ಲಾಕ್ ಆಗಿದೆಯಾ ಅಂತ ಪರಿಶಿಲಿಸಿದ್ದೇನೆ. ಬೆಕ್ಕುಗಳನ್ನು ಸಾಗಿಸುವ ಜವಾಬ್ದಾರಿ ಏರ್ ಲೈನ್ಸ್ ಸಿಬ್ಬಂದಿಯವರದ್ದಾಗಿತ್ತು. ಅಲ್ಲಿ ಸರಿಯಾದ ಸೆಕ್ಯುರಿಟಿ ಇಲ್ಲದೆ ಈ ಘಟನೆ ನಡೆದಿದೆ ಅಂತ ಭುಟಿಯಾ ಆರೋಪಿಸಿದ್ದಾರೆ.

Comments

Leave a Reply

Your email address will not be published. Required fields are marked *