ಅರುಣಾಚಲ ಪ್ರದೇಶದಲ್ಲಿದೆ ಏಷ್ಯಾದ ಶ್ರೀಮಂತ ಹಳ್ಳಿ!

ಇಟಾನಗರ: ಕೇಂದ್ರ ರಕ್ಷಣಾ ಸಚಿವಾಲಯದಿಂದ ಅರುಣಾಚಲಪ್ರದೇಶದ ಹಳ್ಳಿಯ ಜನರಿಗೆ ಕೊಟ್ಯಾಧಿಪತಿಯಾಗುವ ಭಾಗ್ಯ ಬಂದಿದೆ. ಅರುಣಾಚಲಪ್ರದೇಶದ ಬೊಮ್ಜ ಎಂಬ ಹಳ್ಳಿಯು ಈಗ ಏಷ್ಯಾದ ಅತೀ ಶ್ರೀಮಂತ ಹಳ್ಳಿಯಾಗಿ ಹೊರ ಹೊಮ್ಮಿದೆ.

ಕೇಂದ್ರದ ರಕ್ಷಣಾ ಸಚಿವಾಲಯವು ಬೊಮ್ಜ ಹಳ್ಳಿಯಲ್ಲಿ 200.056 ಎಕರೆ ಭೂ ಸ್ವಾಧೀನ ಮಾಡಿರುವ ಕಾರಣ ಪರಿಹಾರ ಧನವಾಗಿ 40,80,38,400 ರೂ. ಗಳನ್ನು ಬಿಡುಗಡೆ ಮಾಡಲಾಗಿದೆ. ಹಳ್ಳಿಯ ಎಲ್ಲಾ ಕುಟುಂಬಗಳಿಗೆ ಪರಿಹಾರ ಹಣವನ್ನು ಕೊಡಲಾಗಿದ್ದು, ಒಂದು ಕುಟುಂಬಕ್ಕೆ 2.44 ಕೋಟಿ ರೂ. ಪರಿಹಾರ ಸಿಕ್ಕಿದರೆ ಮತ್ತೊಂದು ಕುಟುಂಬಕ್ಕೆ 6.73 ಕೋಟಿ ರೂ. ಸಿಕ್ಕಿದೆ.

31 ಕುಟುಂಬಗಳಿರುವ ಹಳ್ಳಿಯಲ್ಲಿ, 29 ಕುಟುಂಬಗಳಿಗೆ ತಲಾ 1,09,03,813.37 ರೂ. ಗಳನ್ನು ಕೊಡಲಾಗಿದೆ. ಇದರಿಂದ ಬೊಮ್ಜ ಕೋಟ್ಯಾಧಿಪತಿಗಳ ಹಳ್ಳಿಯಾಗಿ ಬದಲಾಗಿದೆ. ತಾವಾಂಗ್ ಗ್ಯಾರಿಸನ್‍ನ ಪ್ರಮುಖ ಯೋಜನೆ ಘಟಕಗಳನ್ನು ಸ್ಥಾಪಿಸುವ ಉದ್ದೇಶಕ್ಕಾಗಿ ಭಾರತೀಯ ಸೇನೆಯು ಈ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದೆ.

ಈ ಹಣವನ್ನು ಸೋಮವಾರ ಅರುಣಾಚಲಪ್ರದೇಶದ ಮುಖ್ಯಮಂತ್ರಿ ಪೆಮಾ ಖಾಂಡು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತೀಯ ಸೇನೆಯು ಭೂಸ್ವಾಧೀನ ಪರಿಹಾರವನ್ನು ಮತ್ತಷ್ಟು ನೀಡಲಿದೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *