ಮಲೆನಾಡಿನಲ್ಲಿ ಸಸ್ಪೆನ್ಸ್ ಥ್ರಿಲ್ಲರ್, ರೊಮ್ಯಾಂಟಿಕ್ ‘ಚೂರಿಕಟ್ಟೆ’-ಈ ಕಾರಣಕ್ಕೆ ನೀವು ಸಿನಿಮಾ ನೋಡ್ಲೆಬೇಕು

ಬೆಂಗಳೂರು: ಚಂದನವನದಲ್ಲಿ ಶುಕ್ರವಾರ ‘ಚೂರಿಕಟ್ಟೆ’ ಎಂಬ ಸಿನಿಮಾ ಬಿಡುಗಡೆಯಾಗುತ್ತಿದೆ. ವಿಭಿನ್ನ ಕಥಾಹಂದರವುಳ್ಳ ನೋಡುಗರಿಗೆ ಭರಪೂರ ಮನರಂಜನೆ ನೀಡಲಿದೆ ಎಂದು ಚಿತ್ರತಂಡ ಹೇಳಿದೆ. ಸಿನಿಮಾ ಥ್ರಿಲ್ಲರ್, ರೊಮ್ಯಾಂಟಿಕ್ ಮತ್ತು ಸೆಂಟಿಮೆಂಟ್ ಒಳಗೊಂಡಂತಹ ಕಥೆಯನ್ನು ಹೊಂದಿದೆ.

ಪಬ್ಲಿಕ್ ಟಿವಿ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಚಿತ್ರತಂಡ, ಚಿತ್ರೀಕರಣ ವೇಳೆ ನಡೆದ ನೆನಪುಗಳನ್ನು ಮೆಲಕು ಹಾಕಿಕೊಂಡಿತ್ತು. ಚೂರಿಕಟ್ಟೆ ಎಂಬುವುದು ಮಲೆನಾಡಿನ ಚಿಕ್ಕ ಹಳ್ಳಿ. ಚೂರಿಕಟ್ಟೆ ಅರಣ್ಯ ಪ್ರದೇಶದಲ್ಲಿ ಬೆಲೆಬಾಳುವ ಮರಗಳ ಕಳ್ಳ ಸಾಗಾಣಿಕೆಯ ಕುರಿತಾದದ ಸಿನಿಮಾ ಇದಾಗಿದೆ. ಚಿತ್ರದಲ್ಲಿ ಒಬ್ಬ ನಾಯಕನಿಗೆ ಎಷ್ಟು ಮಹತ್ವ ನೀಡುತ್ತಾರೆ, ಅಷ್ಟೇ ಪ್ರಾಮುಖ್ಯತೆಯನ್ನು ವಿಲನ್ ಪಾತ್ರಧಾರಿ ಬಾಲಾಜಿ ಮೋಹನ್ ಹೊಂದಿದ್ದಾರೆ. ಚಿತ್ರದಲ್ಲಿ ಯಾವುದೇ ಪಾತ್ರವೂ ಹೆಚ್ಚು ಕಡಿಮೆ ಎಂಬುದಿಲ್ಲ. ಎಲ್ಲ ಪಾತ್ರಗಳು ಚಿತ್ರದ ಪರಿಪೂರ್ಣತೆಗೆ ಸಹಾಯವಾಗುತ್ತವೆ ಅಂತಾ ಚೂರಿಕಟ್ಟೆ ಸಿನಿಮಾದ ನಾಯಕ ನಟ ಪ್ರವೀಣ್ ತೇಜ್ ತಿಳಿಸಿದರು.

ನಟಿ ಪ್ರೇರಣಾಗೆ ಇದು ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಮೊದಲ ಚಿತ್ರ. ಕಲಾ ಪಾತ್ರದಲ್ಲಿ ಕಾಣಿಸುವ ಪ್ರೇರಣಾ ಮಲೆನಾಡಿನ ಹಳ್ಳಿಯ ಮುದ್ದಾದ ಮುಗ್ದ ಹುಡುಗಿಯಾಗಿ ನಟಿಸಿದ್ದಾರೆ. ಮಾವನ ಆರೈಕೆಯಲ್ಲಿ ಬೆಳೆಯುವ ನಾಯಕಿ ನಟಿಗೆ ಕುಟುಂಬ ಪ್ರಾಣವಾಗಿರುತ್ತದೆ. ಅದೇ ಗ್ರಾಮದ ಯುವಕನೊಂದಿಗೆ ಪ್ರೀತಿ ಉಂಟಾಗುತ್ತದೆ. ನಾಯಕ ನಟ ಪೊಲೀಸ್ ಆಗಬೇಕೆಂಬ ಕನಸು ಕಾಣುತ್ತಿರುವ ನಟ. ಸುಂದರ ರೊಮ್ಯಾಂಟಿಕ್ ಪ್ರೇಮಕಥೆಯೊಂದಿಗೆ ಸಿನಿಮಾ ಸಾಗುತ್ತಾ ಹೋಗುತ್ತದೆ.

ಚೂರಿಕಟ್ಟೆ ಮಾರ್ನಿಂಗ್ ಸ್ಟಾರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದ್ದು, ಎಸ್ ನಾಯಜ್ ಮತ್ತು ಎಂ.ತುಳಸೀರಾಮುಡು ಬಂಡವಾಳ ಹೂಡಿದ್ದಾರೆ. ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಬಾಲಾಜಿ ಮನೋಹರ್, ಮಂಜುನಾಥ್ ಹೆಗಡೆ, ಪ್ರಮೋದ್ ಶೆಟ್ಟಿ ಸೇರಿದಂತೆ ದೊಡ್ಡ ತಾರಾಬಳಗವನ್ನು ಸಿನಿಮಾ ಹೊಂದಿದೆ. ವಾಸುಕಿ ವೈಭವ್ ಚೂರಿಕಟ್ಟೆಗೆ ಸಂಗೀತ ನೀಡಿದ್ದು, ಈಗಾಗಲೇ ಹಾಡುಗಳು ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ.

https://www.youtube.com/watch?v=BBSR4-APj-k

Comments

Leave a Reply

Your email address will not be published. Required fields are marked *