ಮೊಬೈಲ್ ಬಳಕೆ ಬಗ್ಗೆ ದೊಡ್ಡಮ್ಮ ದೂರು ಹೇಳಿಬಿಡ್ತಾರೆಂದು 9ನೇ ಕ್ಲಾಸ್ ಬಾಲಕಿ ಆತ್ಮಹತ್ಯೆ

ವಿಜಯವಾಡ: ಮೊಬೈಲ್ ಜಾಸ್ತಿ ಬಳಸ್ತಿದ್ದೀಯ, ನಿನ್ನ ತಾಯಿಗೆ ಹೇಳ್ತೀನಿ ಎಂದು ಎಚ್ಚರಿಸಿದ್ದಕ್ಕೆ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ಲಿಖಿತಾ ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಈಕೆ ಇಲ್ಲಿನ ಹೆಡ್ ಕಿಂಗ್ಸ್‍ಟನ್ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಲಿಖಿತಾ ಪೋಷಕರು ಕೆಲಸದ ನಿಮಿತ್ತ ಚೆನ್ನೈಗೆ ಹೋಗಿದ್ದರು. ಹೀಗಾಗಿ ಲಿಖಿತಾ ಮನೆಯಲ್ಲಿ ಒಬ್ಬಳೇ ಇದ್ದಳು. ಹತ್ತಿರದಲ್ಲೇ ವಾಸವಿದ್ದ ಲಿಖಿತಾ ತಾಯಿಯ ಅಕ್ಕ ಆಕೆಯನ್ನ ನೋಡಿಕೊಳ್ತಿದ್ರು.

ಕಳೆದ 3 ದಿನಗಳಿಂದ ಲಿಖಿತಾ ಶಾಲೆಗೆ ಹೋಗಿರಲಿಲ್ಲ. ಆಕೆ ಮೊಬೈಲ್‍ನಲ್ಲಿ ಹೆಚ್ಚಾಗಿ ಮಾತನಾಡುತ್ತಿದ್ದುದನ್ನು ಗಮನಿಸಿದ್ದ ದೊಡ್ಡಮ್ಮ, ಜಾಸ್ತಿ ಮೊಬೈಲ್ ಬಳಸುತ್ತೀಯ ಎಂದು ನಿನ್ನ ಅಮ್ಮನಿಗೆ ಹೇಳ್ತೀನಿ ಎಂದು ಎಚ್ಚರಿಸಿದ್ದರು.

ಶನಿವಾರ ರಾತ್ರಿ ಸುಮಾರು 10 ಗಂಟೆ ವೇಳೆಯಲ್ಲಿ ಲಿಖಿತಾಗೆ ದೊಡ್ಡಮ್ಮ ಕರೆ ಮಾಡಿದ್ದರು. ಆದ್ರೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಭಾನುವಾರ ಬೆಳಗ್ಗೆ ಲಿಖಿತಾ ತಾಯಿ ಬಂದು ಬಾಗಿಲು ಬಡಿದರೂ ಬಾಗಿಲು ತೆರೆದಿರಲಿಲ್ಲ. ನಂತರ ಬಾಗಿಲು ಒಡೆದು ನೋಡಿದಾಗ ಲಿಖಿತಾ ಫ್ಯಾನಿಗೆ ನೇಣು ಬಿಗಿದುಕೊಂಡಿರುವುದು ಪತ್ತೆಯಾಗಿತ್ತು.

ಪ್ರಾಥಮಿಕ ತನಿಖೆಯ ಪ್ರಕಾರ, 3 ದಿನಗಳಿಂದ ಶಾಲೆಗೆ ಹೋಗುತ್ತಿರಲಿಲ್ಲ ಹಾಗೂ ಹೆಚ್ಚಾಗಿ ಮೊಬೈಲ್ ಬಳಕೆ ಮಾಡ್ತಿದ್ದ ಬಗ್ಗೆ ದೂರು ಹೇಳಿಬಿಡ್ತಾರೆಂದು ಹುಡುಗಿ ಹೆದರಿದ್ದಳು. ಆಕೆ ಯಾರೊಂದಿಗೆ ಮಾತನಾಡುತ್ತಿದ್ದಳು ಎಂಬುದನ್ನ ತಿಳಿಯಲು ಕಾಲ್ ಲಿಸ್ಟ್ ಸಂಗ್ರಹಿಸುತ್ತಿದ್ದೇವೆ. ಬಾಲಕಿ ‘ಐ ಮಿಸ್ ಯೂ’ ಎಂದು ಬರೆದಿದ್ದ ಕಾಗದವೊಂದನ್ನ ವಶಪಡಿಸಿಕೊಂಡಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ಬಾಲಕಿ ವಿದ್ಯಾಭ್ಯಾಸದ ವಿಷಯವಾಗಿ ಯಾವುದೇ ಒತ್ತಡದಲ್ಲಿ ಇರಲಿಲ್ಲ. ಹಾಗೇ ಬೇರೆ ಯಾವುದೇ ಸಮಸ್ಯೆ ಇರಲಿಲ್ಲ ಎಂದು ಸಂಬಂಧಿಕರು ಹೇಳಿದ್ದಾರೆ.

ಮರಣೋತ್ತರ ಪರೀಕ್ಷೆ ಮುಗಿದಿದ್ದು, ಇನ್ನೆರಡು ದಿನಗಳಲ್ಲಿ ವರದಿ ಬರಲಿದೆ. ಮರಣೊತ್ತರ ಪರೀಕ್ಷೆಯ ವರದಿ ಹಾಗೂ ಕಾಲ್ ಡೀಟೇಲ್ಸ್ ಪಡೆದ ನಂತರ ಮುಂದಿನ ತನಿಖೆ ನಡೆಯಲಿದೆ ಎಂದು ಇನ್ಸ್ ಪೆಕ್ಟರ್ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *