ಪ್ರೀತಿಯ ಸಾಕುನಾಯಿ ಸಾವು: ಹಾಲು-ತುಪ್ಪ ಬಿಟ್ಟು, ತಿಥಿ ನೆರವೇರಿಸಿದ ಗ್ರಾಮಸ್ಥರು

ಹಾಸನ: ಗ್ರಾಮಸ್ಥರು ನಾಯಿಯ ತಿಥಿ ಮಾಡಿರುವ ಅಪರೂಪದ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕಗ್ಗೆರೆ ಗ್ರಾಮದಲ್ಲಿ ನಡೆದಿದೆ.

ಕಗ್ಗೆರೆ ಗ್ರಾಮದ ಚನ್ನೇಗೌಡ ಎಂಬವರ ಮನೆಯಲ್ಲಿ ಬಹಳ ವರ್ಷಗಳಿಂದ  ಕೆಂಪಾ ಎಂಬ ಹೆಸರಿನ ನಾಯಿ ಇತ್ತು. ಇದು ಇಡೀ ಗ್ರಾಮದ ಪ್ರೀತಿಗೆ ಪಾತ್ರವಾಗಿತ್ತು. ಯಾರಿಗೂ ಕೂಡ ತೊಂದರೆ ಕೊಡದೆ ಇದ್ದುದ್ದರಿಂದ ಪ್ರತಿಯೊಬ್ಬರಿಗೂ ಕೂಡ ಕೆಂಪಾ ಇಷ್ಟವಾಗಿದ್ದ.

ಗ್ರಾಮದವರು ಯಾರೇ ಕರೆದರೂ ಅವರೊಂದಿಗೆ ಹೊಲ ತೋಟಕ್ಕೆ ಹೋಗಿ ಬರಲು ಕೆಂಪಾ ಜೊತೆಗಾರನಾಗಿದ್ದ. ಆದರೆ ಸಂಕ್ರಾಂತಿ ಹಬ್ಬದ ದಿನದಂದು ಎಲ್ಲರ ಪ್ರೀತಿಗೆ ಪಾತ್ರವಾಗಿದ್ದ ಕೆಂಪಾ ಅನಾರೋಗ್ಯದಿಂದ ಸಾವನ್ನಪ್ಪಿದ್ದ.

ಇದರಿಂದ ನೊಂದ ಗ್ರಾಮಸ್ಥರು ಗುರುವಾರ ಕೆಂಪನನ್ನ ಮಣ್ಣು ಮಾಡಿದ ಸ್ಥಳದಲ್ಲಿ ಹಾಲು ತುಪ್ಪ ಬಿಟ್ಟು ಮಾನವೀಯತೆ ಮೆರೆದಿದ್ದಾರೆ. ಈ ವೇಳೆ ಐವತ್ತಕ್ಕೂ ಹೆಚ್ಚು ಮಂದಿ ಕೆಂಪನ ಸಮಾಧಿಗೆ ಪೂಜೆ ಸಲ್ಲಿಸಿ ತಿಥಿಯೂಟವನ್ನ ಕೂಡ ಮಾಡಿದ್ದು ವಿಶೇಷವಾಗಿತ್ತು.

Comments

Leave a Reply

Your email address will not be published. Required fields are marked *