16 ವರ್ಷಗಳ ಮೂಢನಂಬಿಕೆಗೆ ತೆರೆಎಳೆದ ಯುಪಿ ಸಿಎಂ ಯೋಗಿ ಆದಿತ್ಯನಾಥ್

ಲಕ್ನೋ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಆಗ್ರಾದ ಸರ್ಕಿಟ್ ಹೌಸ್‍ನಲ್ಲಿ ವಾಸ್ತವ್ಯ ಹೂಡುವ ಮೂಲಕ 16 ವರ್ಷಗಳ ಮೂಢನಂಬಿಕೆಗೆ ತೆರೆಎಳೆದಿದ್ದಾರೆ.

ಆಗ್ರಾದ ಸರ್ಕಿಟ್ ಹೌಸ್‍ನಲ್ಲಿ ವಾಸ್ತವ್ಯ ಹೂಡಿದರೆ ಸಿಎಂ ಹುದ್ದೆ ಕಳೆದು ಕೊಳ್ಳುತ್ತಾರೆ ಎಂಬ ಮೂಢನಂಬಿಕೆ ಬಲವಾಗಿ ಯುಪಿ ರಾಜಕೀಯ ವಲಯದಲ್ಲಿ ಇದೆ. ಈ ಕಾರಣದಿಂದ ಕಳೆದ 16 ವರ್ಷಗಳಿಂದ ಉತ್ತರ ಪ್ರದೇಶದ ಮುಖ್ಯಮಂತ್ರಿ ಹುದ್ದೆ ಏರಿದ ಯಾರೊಬ್ಬರು ಕೂಡ ಇಲ್ಲಿ ವಾಸ್ತವ್ಯ ಹೂಡಿರಲಿಲ್ಲ.

ಆದರೆ ಇಂದು ಸಿಎಂ ಯೋಗಿ ಆದಿತ್ಯನಾಥ್ ಅವರು ಅದೇ ಸರ್ಕಿಟ್ ಹೌಸ್ ನಲ್ಲಿ ವಾಸ್ತವ್ಯ ಹೂಡುವ ಮೂಲಕ ಮೂಢ ನಂಬಿಕೆಯನ್ನು ದೂರ ಮಾಡಿದ್ದಾರೆ. ಈ ಮೂಲಕ ತಾವು ವೈಜ್ಞಾನಿಕ ಚಿಂತನೆ ಇರುವ ಸಿಎಂ ಎಂದು ಸಾಬೀತು ಪಡಿಸಿದ್ದಾರೆ. ಮಂಗಳವಾರ ಭಾರತದ ಪ್ರವಾಸದಲ್ಲಿರುವ ಇಸ್ರೇಲ್ ಪ್ರಧಾನಿ ನೆತುನ್ಯಾಹು ದಂಪತಿ ಆಗ್ರಾ ತಾಜ್ ಮಹಲ್ ಗೆ ಭೇಟಿ ನೀಡಿದ್ದರು. ಅವರಿಗೆ ಸ್ವಾಗತ ಕೋರಲು ಆಗ್ರಾಕ್ಕೆ ಬಂದಿದ್ದ ಯೋಗಿ ಸರ್ಕಿಟ್ ಹೌಸ್‍ನಲ್ಲಿ ವಾಸ್ತವ್ಯ ಹೂಡಿದ್ದರು.

16 ವರ್ಷಗಳ ಹಿಂದೆ ಉತ್ತರ ಪ್ರದೇಶ ಸಿಎಂ ಪ್ರಸ್ತುತ ಗೃಹ ಸಚಿವರಾಗಿರುವ ರಾಜನಾಥ್ ಸಿಂಗ್ ಅವರು ಇಲ್ಲಿ ವಾಸ್ತವ್ಯ ಹೂಡಿ ತಮ್ಮ ಸಿಎಂ ಹುದ್ದೆಯನ್ನು ಕಳೆದು ಕೊಂಡಿದ್ದರು. ನಂತರ ಯುಪಿ ಸಿಎಂಗಳಾದ ಮುಲಾಯಂ ಸಿಂಗ್ ಯಾದವ್, ಮಾಯಾವತಿ ಮತ್ತು ಅಖಿಲೇಶ್ ಯಾದವ್ ಇಲ್ಲಿ ವಾಸ್ತವ್ಯ ಮಾಡಿರಲಿಲ್ಲ. ಒಂದು ವೇಳೆ ಆಗ್ರಾಕ್ಕೆ ಬಂದಿದ್ದರೂ ನಗರದ ಸ್ಟಾರ್ ಹೋಟೆಲ್‍ಗಳಲ್ಲಿ ಉಳಿದುಕೊಳ್ಳುತ್ತಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಿಟ್ ಹೌಸ್‍ನಲ್ಲಿ ವಾಸ್ತವ್ಯ ಹೂಡುವ ಮುಖ್ಯಮಂತ್ರಿಗಳು ತಮ್ಮ ಪದವಿ ಕಳೆದುಕೊಳ್ಳಲಿದ್ದಾರೆ ಎಂಬ ಮೂಢನಂಬಿಕೆ ಚಾಲ್ತಿಗೆ ಬಂದಿತ್ತು.

ಯೋಗಿ ಆದಿತ್ಯನಾಥ್ ಅವರ ಈ ನಿರ್ಧಾರವನ್ನು ಕಂಡು ಮಾಧ್ಯಮದವರು ಪ್ರಶ್ನಿಸಿದ ವೇಳೆ ಮುಗುಳುನಕ್ಕು ಸುಮ್ಮನಾಗಿದ್ದಾರೆ. ಕಳೆದ ವರ್ಷ ಕೂಡ ಯೋಗಿ 29 ವರ್ಷಗಳ ಮೂಢನಂಬಿಕೆಯನ್ನು ಧಿಕ್ಕರಿಸಿ ನೋಯ್ಡಾಗೆ ಭೇಟಿ ನೀಡಿದ್ದರು. ಪ್ರಧಾನಿ ಮೋದಿ ಅವರು ಸಹ ಆದಿತ್ಯನಾಥ್ ಅವರ ನಿರ್ಧಾರವನ್ನು ಕೇಳಿ ಶ್ಲಾಘಿಸಿದ್ದರು.

ನೋಯ್ಡಾಗೆ ಭೇಟಿ ನೀಡುವ ಉತ್ತರ ಪ್ರದೇಶ ಮುಖ್ಯಮಂತ್ರಿಗಳು ಮತ್ತೊಮ್ಮೆ ಅಧಿಕಾರಕ್ಕೆ ಬರುವುದಿಲ್ಲ ಎಂಬ ಮೂಢ ನಂಬಿಕೆ ಉತ್ತರಪ್ರದೇಶಲ್ಲಿದೆ. ಡಿಸೆಂಬರ್ ನಲ್ಲಿ ದೆಹಲಿಯ ಜನಕಪುರಿಯಿಂದ ನೋಯ್ಡಾದವರೆಗೆ ಮೆಜೆಂತಾ ಮೆಟ್ರೋ ಲೈನ್ ನಿರ್ಮಿಸಲಾಗಿದ್ದು, ಮೆಟ್ರೋ ರೈಲು ಉದ್ಘಾಟನೆಯ ಕಾರ್ಯಕ್ರಮದಲ್ಲಿ ಭಾಗಿಯಾಗಲು ಯೋಗಿ ಆದಿತ್ಯನಾಥ್ ನೋಯ್ಡಾಗೆ ಭೇಟಿ ನೀಡಿದ್ದರು.

Comments

Leave a Reply

Your email address will not be published. Required fields are marked *