ಅಕ್ರಮ ತಿಳಿದು ಕಾರ್ಯಕ್ರಮದ ವೇದಿಕೆಯಿಂದಲೇ ಸ್ವಾಮೀಜಿಯನ್ನು ಹೊರಹಾಕಿದ ಜನ!

ಬಾಗಲಕೋಟೆ: ಸ್ವಾಮೀಜಿಯೊಬ್ಬನ ಅಕ್ರಮ ಚಟುವಟಿಕೆಯ ವಿಚಾರ ತಿಳಿದು ಆತನನ್ನು ಗ್ರಾಮಸ್ಥರೇ ವೇದಿಕೆಯಿಂದ ಹೊರಹಾಕಿದ ಘಟನೆ ಹುನಗುಂದ ತಾಲೂಕಿನ ಸೂಳಿಬಾವಿ ಗ್ರಾಮದಲ್ಲಿ ನಡೆದಿದೆ.

ಸೂಳಿಭಾವಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ನಡೆಸಲಾಗಿತ್ತು. ಶಾಲಾ ಸಿಬ್ಬಂದಿ ಘನಮಠೇಶ್ವರ ಸ್ವಾಮೀಜಿಯ ಹಿಂದಿನ ಅಕ್ರಮ ವಿಚಾರ ತಿಳಿಯದೇ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನ ವಹಿಸುವಂತೆ ಕೇಳಿಕೊಂಡು ಆಹ್ವಾನ ನೀಡಿದ್ದರು.

ಆಹ್ವಾನ ನೀಡಿದ ಬಳಿಕ ಶಾಲೆಯ ಮುಖ್ಯಸ್ಥರು ಮತ್ತು ಗ್ರಾಮೀಣ ನೈರ್ಮಲ್ಯ ಮತ್ತು ಶುದ್ಧ ಕುಡಿಯುವ ನೀರು ಸಮಿತಿ ಅಧ್ಯಕ್ಷರಾಗಿರುವ ಎಸ್.ಜಿ ನಂಜಯ್ಯನಮಠ ಅವರಿಗೆ ಜಿಲ್ಲೆ ಹಿರೆಕೆರೂರು ತಾಲೂಕಿನ ಅಬಲೂರು ಗ್ರಾಮದ ಈ ಸ್ವಾಮೀಜಿ ಒಂದು ಕೋಟಿಗೂ ಹೆಚ್ಚು ಹಣ ವಂಚನೆ ಮಾಡಿದ್ದು ಅಲ್ಲದೇ ಇಬ್ಬರನ್ನು ಮದುವೆಯಾಗಿ ಮೋಸ ಮಾಡಿದ್ದಾನೆ ಎನ್ನುವ ಮಾಹಿತಿ ತಿಳಿದಿದೆ.

ವಿಚಾರ ತಿಳಿದ ಬಳಿಕ ಎಸ್.ಜಿ ನಂಜಯ್ಯನಮಠ ಮುಜುಗರ ತಪ್ಪಿಸಿಕೊಳ್ಳಲು ಸ್ವಾಮೀಜಿಗೆ ಫೋನ್ ಮಾಡಿ ಕಾರ್ಯಕ್ರಮ ರದ್ದಾಗಿದೆ ಬರಬೇಡಿ ಎಂದರೂ, ಕಳ್ಳ ಸ್ವಾಮೀಜಿ ಕಾರ್ಯಕ್ರಮಕ್ಕೆ ಹಾಜರಾಗಿದ್ದ. ಬರಬೇಡಿ ಎಂದರೂ ಕಾರ್ಯಕ್ರಮಕ್ಕೆ ಹಾಜರಾಗಿದ್ದನ್ನು ನೋಡಿ ಗ್ರಾಮಸ್ಥರು ಹಾಗೂ ಮಾಜಿ ಶಾಸಕ ನಂಜಯನಮಠ ಈ ಸ್ವಾಮೀಜಿಯನ್ನ ವೇದಿಕೆಯಿಂದ ಹೊರ ನಡೆಯುವಂತೆ ಆಕ್ರೋಶದಿಂದ ಆಗ್ರಹಿಸಿದ್ದಾರೆ.

ಈ ವೇಳೆ ಘನಮಠೇಶ್ವರ ಸ್ವಾಮೀಜಿ ನಾನು ಹಿಂದೂ ಧರ್ಮದ ರಕ್ಷಕ. ಧರ್ಮದ ಉಳಿವಿಗಾಗಿ ಹೋರಾಡುತ್ತಿದ್ದೇನೆ. ನಾನು ಉಗ್ರಗಾಮಿಯೇ? ನಕ್ಸಲೈಟಾ ಎಂದು ಪ್ರಶ್ನೆ ಮಾಡಿದ್ದಲ್ಲದೇ, ನಾನು ತಪ್ಪು ಮಾಡಿದರೆ ಇಲ್ಲೇ ಗಲ್ಲಿಗೇರಿಸಬೇಕು ಇಲ್ಲವೇ ಕಾರ್ಯಕ್ರಮ ನಡೆಯಲು ಬಿಡಬಾರದು ಎಂದು ರಾದ್ಧಾಂತ ಮಾಡಿದ್ದಾನೆ.

ಈತನ ಮಾತುಗಳಿಗೆ ಕೆರಳಿದ ಗ್ರಾಮಸ್ಥರು ಇದು ಮಕ್ಕಳ ಕಾರ್ಯಕ್ರಮ ಇಲ್ಲಿ ನಿನ್ನ ಅಸಂಬದ್ಧ ಮಾತುಗಳಿಗೆ ಆಸ್ಪದವಿಲ್ಲ, ಮೊದಲು ಹೊರಹೋಗಿ ಎಂದು ಹೇಳಿ ಸ್ವಾಮೀಜಿಯನ್ನು ಹೊರದಬ್ಬಿದ್ದಾರೆ.

Comments

Leave a Reply

Your email address will not be published. Required fields are marked *