ಬೌಲರ್ ಗಳ ಅಬ್ಬರಕ್ಕೆ ಮೊದಲ ದಿನವೇ ಉರುಳಿತು 13 ವಿಕೆಟ್!

ಕೇಪ್‍ಟೌನ್: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನವೇ 13 ವಿಕೆಟ್ ಗಳು ಪತನಗೊಂಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಫ್ರಿಕಾ 73.1 ಓವರ್ ಗಳಲ್ಲಿ 286 ರನ್ ಗಳಿಗೆ ಆಲೌಟ್ ಆದರೆ ಭಾರತ 11 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 28 ರನ್ ಗಳಿಸಿದೆ.

ದಕ್ಷಿಣ ಆಫ್ರಿಕಾ 12 ರನ್ ಗಳಿಸುವಷ್ಟರಲ್ಲೇ ಮೂರು ವಿಕೆಟ್‍ಗಳನ್ನು ಕಳೆದುಕೊಂಡಿತ್ತು. ವೇಗಿ ಭುವನೇಶ್ವರ್ ಕುಮಾರ್ ಈ ಮೂರು ವಿಕೆಟ್ ಕಿತ್ತು ಆರಂಭಿಕ ಆಘಾತ ನೀಡಿದರು. ನಾಲ್ಕನೇಯ ವಿಕೆಟ್ ಗೆ ಎಬಿಡಿ ವಿಲಿಯರ್ಸ್ ಮತ್ತು ನಾಯಕ ಡುಪ್ಲೆಸಿಸ್ 114 ರನ್ ಜೊತೆಯಾಟವಾಡಿ ಆರಂಭದ ಕುಸಿತದಿಂದ ಪಾರು ಮಾಡಿದರು.

ವಿಲಿಯರ್ಸ್ 65 ರನ್(84 ಎಸೆತ, 11 ಬೌಂಡರಿ) ಹೊಡೆದರೆ, ಡು ಪ್ಲೆಸಿಸ್ 62 ರನ್(104 ಎಸೆತ, 12 ಬೌಂಡರಿ) ಹೊಡೆದು ಔಟಾದರು. ಕ್ವಿಂಟನ್ ಡಿ ಕಾಕ್ 43 ರನ್(40 ಎಸೆತ, 7 ಬೌಂಡರಿ, ಕೇಶವ್ ಮಹರಾಜ್ 35 ರನ್(47 ಎಸೆತ, 3 ಬೌಂಡರಿ, 1 ಸಿಕ್ಸರ್) ರಬಾಡ 26 ರನ್ ಹೊಡೆದರು.

ಭಾರತದ ಪರ ಭುವನೇಶ್ವರ್ ಕುಮಾರ್ 4 ವಿಕೆಟ್ ಕಿತ್ತರೆ, ಆರ್ ಅಶ್ವಿನ್ 2 ವಿಕೆಟ್ ಪಡೆದರು. ಮೊಹಮ್ಮದ್ ಶಮಿ, ಹಾರ್ದಿಕ್ ಪಾಂಡ್ಯ ತಲಾ ಒಂದೊಂದು ವಿಕೆಟ್ ಪಡೆದರು. ಈ ಪಂದ್ಯದಲ್ಲಿ ಟೆಸ್ಟ್ ಕ್ಯಾಪ್ ಧರಿಸಿದ ಬುಮ್ರಾ ಒಂದು ವಿಕೆಟ್ ಕಿತ್ತರು.

ಭಾರತಕ್ಕೂ ಶಾಕ್: ಬೌಲರ್ ಗಳಿಗೆ ಪಿಚ್ ಸಹಕರಿಸುತ್ತಿರುವ ಕಾರಣ ಭಾರತವೂ 27 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿದೆ. ಮುರಳಿ ವಿಜಯ್ 1, ಶಿಖರ್ ಧವನ್ 16, ನಾಯಕ ವಿರಾಟ್ ಕೊಹ್ಲಿ 5 ರನ್ ಗಳಿಸಿ ಔಟಾಗಿದ್ದಾರೆ. ದಿನದ ಕೊನೆಯಲ್ಲಿ ಚೇತೇಶ್ವರ ಪೂಜಾರ 5 ರನ್, ರೋಹಿತ್ ಶರ್ಮಾ 0 ರನ್ ಗಳಿಸಿದ್ದು, ಶನಿವಾರ ಬ್ಯಾಟಿಂಗ್ ಮುಂದುವರಿಸಲಿದ್ದಾರೆ. ಫಿಲಾಂಡರ್, ಸ್ಟೈನ್ ಮತ್ತು ಮಾರ್ಕೆಲ್ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ.

Comments

Leave a Reply

Your email address will not be published. Required fields are marked *