ಹಾವು ಹಿಡಿಯೋ ದಿನನಿತ್ಯದ ವೃತ್ತಿ ಜೊತೆಗೆ ಅನಾಥ ಜೀವಗಳನ್ನು ಪೋಷಿಸ್ತಿದ್ದಾರೆ ಶಿವಮೊಗ್ಗದ ಜೇನಿ ಪ್ರಭಾಕರ್

ಶಿವಮೊಗ್ಗ: ಸರ್ಕಾರಿ ಅನುದಾನ ಪಡೆದು, ಅವರಿವರಿಂದ ಕೊಡುಗೆ ಪಡೆದು ಆಶ್ರಮ ನಡೆಸುವುದು ಸಾಮಾನ್ಯ. ಆದರೆ, ಇಲ್ಲೊಬ್ಬರು ಸರ್ಪಗಳ ಸಹವಾಸ ಮಾಡಿ ಅನಾಥರನ್ನು ಸಾಕುತ್ತಿದ್ದಾರೆ. ಶಿವಮೊಗ್ಗದ ಜೇನಿ ಪ್ರಭಾಕರ್ ಅವರೇ ನಮ್ಮ ಪಬ್ಲಿಕ್ ಹೀರೋ.

ನೂರಾರು ಮಂದಿಗೆ ಆಸರೆ ನೀಡಿದ್ದ ಈ ಶಿವಮೊಗ್ಗದ ಹೊಸನಗರ ತಾಲೂಕಿನ ರಿಪ್ಪನ್‍ಪೇಟೆಯ ಚಿಕ್ಕಜೇನಿಯಲ್ಲಿರೋ ಪದ್ಮಶ್ರೀ ಅನಾಥಾಶ್ರಮ, ವಯೋವೃದ್ಧರಿಗೆ, ಮಾನಸಿಕ ಅಸ್ವಸ್ಥರಿಗೆ ಆಶ್ರಯತಾಣವಾಗಿದೆ. ಈ ಆಶ್ರಮದಲ್ಲಿ ಸುಮಾರು 20 ಮಂದಿ ಆಸರೆ ಪಡೆದಿದ್ದಾರೆ.

ಪದ್ಮಶ್ರೀ ಅನಾಥಾಶ್ರಮದ ರೂವಾರಿ ಜೇನಿ ಪ್ರಭಾಕರ್. ಕೇವಲ ಹಾವು ಹಿಡಿಯೋ ಮೂಲಕವೇ ಈ ಆಶ್ರಮವನ್ನ ನಡೆಸುತ್ತಿದ್ದಾರೆ. ಈ ಭಾಗದಲ್ಲಿ ಎಲ್ಲೇ ಹಾವು ಕಂಡು ಬಂದ್ರೂ ಕರೆ ಮೊದಲು ಬರೋದು ಜೇನಿ ಪ್ರಭಾಕರ್ ಅವರಿಗೆ. ಹಾವು ಹಿಡಿದಿದ್ದಕ್ಕೆ ಪ್ರತಿಯಾಗಿ ಧವಸ ಧಾನ್ಯ, ತರಕಾರಿ ಪಡೆದು ಅನಾಥರನ್ನು ಪೋಷಿಸುತ್ತಿದ್ದಾರೆ.

ಜೇನಿ ಪ್ರಭಾಕರ್ ಆಶ್ರಮ ಸ್ಥಾಪಿಸಲು ಕಾರಣ ಬಾಲ್ಯದಲ್ಲಿ ನಡೆದ ಕಹಿ ಘಟನೆ. ಕೆಲಸ ಅರಸಿ ಮುಂಬೈಗೆ ಹೋಗಿದ್ದ ಪ್ರಭಾಕರ್ ಪರ್ಸ್ ಕಳೆದುಕೊಂಡು ಭಿಕ್ಷೆ ಬೇಡಿದ್ರಂತೆ. ಆಗ ಮಾನಸಿಕ ಅಸ್ವಸ್ಥರು, ವಯೋವೃದ್ಧರ ಕಷ್ಟ ಜೇನಿ ಮನಸ್ಸಿಗೆ ತಟ್ಟಿತ್ತಂತೆ. ಅಲ್ಲಿಂದ ವಾಪಸ್ ಆಗಿ ಹಾವು ಹಿಡಿಯೋ ವೃತ್ತಿ ಕರಗತ ಮಾಡಿಕೊಂಡ ಜೇನಿ, 2012ರಲ್ಲಿ ಪದ್ಮಶ್ರೀ ಅನಾಥಾಶ್ರಮ ಸ್ಥಾಪಿಸಿದ್ದಾರೆ.

ಇನ್ನಷ್ಟು ಮಂದಿಗೆ ನೆರವಾಗುವ ನಿಟ್ಟಿನಲ್ಲಿ ತಮ್ಮ 2 ಎರಡೆಕರೆ ಜಮೀನಿನಲ್ಲಿ ಈಗ ದೊಡ್ಡ ಅನಾಥಾಶ್ರಮ ಕಟ್ಟುತ್ತಿದ್ದಾರೆ. ಇದಕ್ಕಾಗಿ ಧರ್ಮಸ್ಥಳದಿಂದ 2ಲಕ್ಷ ಹಣದ ನೆರವು ದೊರಕಿದೆ. ಉಳಿದ ಹಣಕ್ಕಾಗಿ ದಾನಿಗಳ ನೆರವಿಗೆ ಕಾಯುತ್ತಿದ್ದಾರೆ.

https://www.youtube.com/watch?v=Ua9wibyA5b4

Comments

Leave a Reply

Your email address will not be published. Required fields are marked *