ನಾಡಿಗೆ ಬಂದ ಕಾಡಾನೆಗಳ ಪತ್ತೆಗಾಗಿ ಡ್ರೋನ್ ಕ್ಯಾಮೆರಾ ಬಳಸಿದ ಅರಣ್ಯ ಇಲಾಖೆ

ರಾಮನಗರ: ಆಹಾರ ಅರಸಿಕೊಂಡು ಕಾಡಿನಿಂದ ನಾಡಿಗೆ ಎರಡು ಕಾಡಾನೆಗಳು ಬಂದಿದ್ದು, ಬೆಂಗಳೂರು ಹೊರವಲಯದ ಕುಂಬಳಗೋಡು ಹಾಗೂ ಕೆಂಗೇರಿ ಬಳಿ ಬೀಡುಬಿಟ್ಟಿವೆ ಎನ್ನಲಾಗಿದೆ.

ಕೆಂಗೇರಿ ಸಮೀಪದ ಕಂಬೀಪುರದಲ್ಲಿ ಈ ಎರಡು ಆನೆಗಳು ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ. ಬೆಂಗಳೂರು- ಮೈಸೂರು ಹೆದ್ದಾರಿ ಸಮೀಪದಲ್ಲೇ ಕಾಡಾನೆಗಳು ಓಡಾಟ ನಡೆಸಿದ್ದು, ನಂತರ ಅವುಗಳು ದಟ್ಟವಾದ ಪೊದೆಗಳ ನಡುವೆ ಸೇರಿರುವ ಕಾರಣ ಅರಣ್ಯ ಇಲಾಖೆ ಆನೆಗಳ ಪತ್ತೆಗಾಗಿ ಡ್ರೋನ್ ಕ್ಯಾಮೆರಾದ ಬಳಕೆ ಮಾಡಿದ್ದಾರೆ.

ಬನ್ನೇರುಘಟ್ಟ ಅರಣ್ಯ ಪ್ರದೇಶದಿಂದ ಬಂದಿರುವ ಕಾಡಾನೆಗಳು ಸಾವನದುರ್ಗ ಅರಣ್ಯ ಪ್ರದೇಶ ತಲುಪುವ ವೇಳೆ ತಪ್ಪು ದಾರಿಯಲ್ಲಿ ನುಗ್ಗಿ ನಗರಪ್ರದೇಶದ ಕಡೆಗೆ ಬಂದಿವೆ. ಇನ್ನೂ ರಾಮನಗರ ವಲಯ ಅರಣ್ಯಾಧಿಕಾರಿ ದಾಳೇಶ್ ನೇತೃತ್ವದಲ್ಲಿ ಕಾಡಾನೆಗಳನ್ನು ಬನ್ನೇರುಘಟ್ಟ ಅರಣ್ಯಕ್ಕೆ ಓಡಿಸುವ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಾರ್ಯಾಚರಣೆಗಾಗಿ 40 ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.

ಬೆಂಗಳೂರು ದಕ್ಷಿಣ ತಾಲೂಕಿನ ಎಸಿಎಫ್ ವರುಣ್ ಕುಮಾರ್ ಹಾಗೂ ಕಗ್ಗಲೀಪುರ ವಲಯ ಅರಣ್ಯಾಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.

Comments

Leave a Reply

Your email address will not be published. Required fields are marked *