ಬಿಜೆಪಿ ನಾಯಕರಿಗೆ ಬುದ್ಧಿ ಬೆಳೆದಿಲ್ಲ, ಪೇಜಾವರ ಶ್ರೀ ಎಲ್ಲದಕ್ಕೂ ಮಾತನಾಡುತ್ತಾರೆ- ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಕಿಡಿ

ಮೈಸೂರು: ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡು ಬಿಜೆಪಿ ಸೇರಿದ್ದ ಮಾಜಿ ಸಚಿವ ವಿ. ಶ್ರೀನಿವಾಸ್‍ಪ್ರಸಾದ್ ಈಗ ಬಿಜೆಪಿ ನಾಯಕರ ವಿರುದ್ಧವೇ ಗುಡುಗಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂವಿಧಾನದ ಬಗ್ಗೆ ಅಪಸ್ವರ ಎತ್ತಿರುವ ಬಿಜೆಪಿ ನಾಯಕರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎರಡು ಬಾರಿ ಎಂಎಲ್‍ಸಿ ಆಗಿರುವ ಗೋ.ಮಧುಸೂದನ್ ಗೆ ಇನ್ನೂ ಬುದ್ದಿ ವಿಕಾಸವಾಗಿಲ್ಲ. ಗೋ. ಮಧುಸೂದನ್ ರನ್ನು ಎಲ್ಲರೂ ಗೋ ಅನ್ನುತ್ತಾರೆ, ಕಮ್ ಅನ್ನೋದಿಲ್ಲಾ. ಆತ ಅನಾವಶ್ಯಕವಾಗಿ ಸಂವಿಧಾನದ ಬಗ್ಗೆ ಮಾತನಾಡುತ್ತಾನೆ. ಸಂವಿಧಾನದ ಬಗ್ಗೆ ಹಗುರ ಹೇಳಿಕೆ ಸರಿಯಲ್ಲ. ಈತನಿಗೆ ನಾಚಿಕೆ ಆಗಬೇಕು. ಇಂತಹ ಮಧುಸೂಧನ್ ಬಿಜೆಪಿ ವಕ್ತಾರನಾಗುತ್ತಾನೆ ಎಂದು ತಮ್ಮದೇ ಪಕ್ಷದ ನಾಯಕನ ವಿರುದ್ಧ ಏಕವಚನ ಪ್ರಯೋಗ ಮಾಡಿದ್ರು.

ಇದೇ ವೇಳೆ ಕೇಂದ್ರ ಸಚಿವ ಅನಂತ ಕುಮಾರ್ ಹೆಗ್ಡೆ ಬಗ್ಗೆ ಕೂಡ ಶ್ರೀನಿವಾಸ ಪ್ರಸಾದ್ ಚಾಟಿ ಬೀಸಿದ್ರು. ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಈತನನ್ನು ಮಂತ್ರಿ ಮಾಡಿರುವುದು ಅವಮಾನ. ವಿಶ್ವದಲ್ಲೇ ಶ್ರೇಷ್ಠ ಸಂವಿಧಾನ ಅಂದರೆ ಅದು ಭಾರತದ ಸಂವಿಧಾನ ಅಂದ್ರು.

ಸಂವಿಧಾನವನ್ನ ಅಂಬೇಡ್ಕರ್ ಒಬ್ಬರೇ ಬರೆದಿದ್ದಲ್ಲ ಎಂದು ಹೇಳಿಕೆ ನೀಡಿರುವ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ವಿರುದ್ಧವೂ ಟೀಕಾಪ್ರಹಾರ ನಡೆಸಿದ ಶ್ರೀನಿವಾಸಪ್ರಸಾದ್, ಪೇಜಾವರಶ್ರೀಗಳು ನೀಡಿರುವ ಹೇಳಿಕೆ ಖಂಡನೀಯ. ಧರ್ಮಸಂಸದ್ ನಲ್ಲಿ ಮೋಹನ್ ಭಾಗವತ್ ಒಬ್ಬರು ಮಾತ್ರ ಸರಿಯಾಗಿ ಮಾತನಾಡಿದರು ಎಂದು ಹೇಳಿದ್ರು.

ಮಠಾಧಿಪತಿಗಳು ತಮ್ಮ ಪಾಡಿಗೆ ಮಠದ ಕಾರ್ಯಗಳನ್ನು ನೋಡಿಕೊಂಡಿರಬೇಕು. ಪೇಜಾವರ ಶ್ರೀಗಳು ಯಾಕೋ ಎಲ್ಲದಕ್ಕೂ ಮಾತನಾಡುತ್ತಾರೆ. ಸಾಕು, ಇನ್ನು ಮೇಲಾದರೂ ಗಂಭೀರವಾಗಿ ಇರಿ. ಶೃಂಗೇರಿ ಮಠ ಇದೆ, ಪರಕಾಲ ಮಠ ಇದೆ, ಇನ್ನೂ ಬೇಕಾದಷ್ಟು ಮಠಗಳಿವೆ. ಅವರು ಅವರಷ್ಟಕ್ಕೆ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ನೀವ್ಯಾಕೆ ಎಲ್ಲದ್ದಕ್ಕೂ ಪ್ರತಿಕ್ರಿಯೆ ಕೊಡ್ತೀರಿ. ನಿಮಗೆ ಈ ದೇಶದ ಹಿನ್ನೆಲೆ, ಇತಿಹಾಸ ಗೊತ್ತಿಲ್ಲ. ನೀವು ಬೆಳೆದು ಬಂದಿರುವ ಹಿನ್ನೆಲೆಯೇ ಬೇರೆ ಅಂತಾ ವಾಗ್ದಾಳಿ ನಡೆಸಿದ್ರು.

ನನಗೆ ರಾಜಕೀಯ ಮುಖ್ಯವಲ್ಲ, ಅಂಬೇಡ್ಕರ್ ಮುಖ್ಯ. ನಮಗೆ ಅಂಬೇಡ್ಕರ್ ಆಧ್ಯಾತ್ಮಿಕ ನಾಯಕ. ನಾನು ಬಿಜೆಪಿಯಲ್ಲಿ ಇರಬಹುದು. ಅದು ನನ್ನ ರಾಜಕೀಯ ಅನಿವಾರ್ಯತೆ ಅಷ್ಟೆ. ನರೇಂದ್ರ ಮೋದಿ ಪ್ರಧಾನಿ ಇರಬಹುದು, ಅಮಿತ್ ಷಾ ರಾಷ್ಟ್ರೀಯ ಅಧ್ಯಕ್ಷ ಇರಬಹುದು. ಈ ಪಕ್ಷದಲ್ಲಿ ಇದ್ದೇವೆ. ಆ ಕಾರಣಕ್ಕಾಗಿ ಲಾಯಲ್ ಆಗಿ ಇರುತ್ತೇವೆ. ಆದರೆ ಅವರು ರಾಜಕೀಯ ನಾಯಕರು ಮಾತ್ರ. ನಮ್ಮ ಆಧ್ಯಾತ್ಮಿಕ ನಾಯಕ ಅಂಬೇಡ್ಕರ್ ಮಾತ್ರ. ಗುಜರಾತ್ ಚುನಾವಣೆ ಸಂದರ್ಭದಲ್ಲಿ ನೀಚ ಪದ ಬಳಸಿದ ಮಣಿಶಂಕರ್ ಅಯ್ಯರ್ ವಿರುದ್ಧ ಆ ಪಕ್ಷ ಕ್ರಮ ಕೈಗೊಂಡಿತು. ಸಂವಿಧಾನದ ಬಗ್ಗೆ ಮಾತನಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು ಅಂತ ಪಕ್ಷದ ಹೈಕಮಾಂಡ್ ವಿರುದ್ಧವೂ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ರು.

ಬಾಲಿಶವಾದ ಹೇಳಿಕೆ ನೀಡಿರುವವರ ವಿರುದ್ಧ ಮೊದಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪಕ್ಷ ಎಚ್ಚರಿಕೆ ನೀಡಬೇಕು ಎಂದು ಆಗ್ರಹಿಸಿದ್ರು.

Comments

Leave a Reply

Your email address will not be published. Required fields are marked *