ಮಂಗ್ಳೂರಲ್ಲಿ ಹೊಸ ವರ್ಷಾಚರಣೆಗೆ ಹದ್ದಿನ ಕಣ್ಣು – ಹಿಂದೂಪರ ಸಂಘಟನೆಗಳಿಂದ ನೈತಿಕ ಪೊಲೀಸ್‍ಗಿರಿ

ಮಂಗಳೂರು: ಈ ಬಾರಿ ಮಂಗಳೂರಿನಲ್ಲಿ ನ್ಯೂ ಇಯರ್ ಪಾರ್ಟಿ ಮೇಲೆ ನೈತಿಕ ಪೊಲೀಸ್‍ಗಿರಿ ಛಾಯೆ ಆವರಿಸಿದೆ. ಮಂಗಳೂರಿನಲ್ಲಿ ಹೊಸ ವರ್ಷಾಚರಣೆಯ ಪಾರ್ಟಿಗೆ ಹೋಗೋರಿದ್ದರೆ ಹುಷಾರು. ನಿಮ್ಮ ಮಕ್ಕಳೇನಾದರೂ ಕಪಲ್ಸ್ ಗಳಾಗಿ ನ್ಯೂ ಇಯರ್ ಪಾರ್ಟಿಗೆ ಹೋದರೆ ಅಪಾಯ ಆಹ್ವಾನಿಸಿಕೊಳ್ತೀರಿ.

ಹೌದು. ಇಂತಹದ್ದೊಂದು ಮುನ್ಸೂಚನೆ ಮೊದಲೇ ಸಿಕ್ಕಿಬಿಟ್ಟಿದೆ. ಕಡಲ ನಗರಿ ಮಂಗಳೂರಿನಲ್ಲಿ ಈ ಬಾರಿ ನ್ಯೂ ಇಯರ್ ಪಾರ್ಟಿ ನೆಪದಲ್ಲಿ ಕಪಲ್ಸ್ ಪಾರ್ಟಿ ಮಾಡೋ ರೆಸ್ಟೋರೆಂಟ್‍ಗಳಿಗೆ ಹಿಂದು ಸಂಘಟನೆಗಳು ಮೊದಲೇ ಎಚ್ಚರಿಕೆ ನೀಡಿದ್ದು, ತಪ್ಪಿದರೆ ರೇಡ್ ಮಾಡೋ ಬೆದರಿಕೆ ಹಾಕಿದೆ. ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಮತ್ತು ಅಬಕಾರಿ ಇಲಾಖೆಗೂ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಮನವಿ ನೀಡಿದ್ದು, ಯಾವುದೇ ರೀತಿಯಲ್ಲೂ ಮಧ್ಯರಾತ್ರಿ ನಂತರದ ಪಾರ್ಟಿಗಳಿಗೆ ಅವಕಾಶ ನೀಡಬಾರದು ಅನ್ನುವ ಆಗ್ರಹ ಮಾಡಿದೆ.

ಮುಖ್ಯವಾಗಿ ತಡರಾತ್ರಿ ನಡೆಯೋ ಪಾರ್ಟಿಗಳಲ್ಲಿ ಹರೆಯದ ಯುವಕ-ಯುವತಿಯರು ಪಾಲ್ಗೊಳ್ಳುತ್ತಾರೆ. ಅಶ್ಲೀಲ ನೃತ್ಯ, ಗಾಂಜಾ, ಡ್ರಗ್ಸ್ ಸೇವನೆಯಿಂದ ಅಲ್ಲಿ ಹದ್ದು ಮೀರಿದ ವರ್ತನೆಗಳು ನಡೆಯುತ್ತವೆ. ಇಂತಹ ಪಾರ್ಟಿಗಳಲ್ಲಿ ಕೇವಲ ಕಪಲ್ಸ್ ಮಾತ್ರ ಬರುತ್ತಿದ್ದು ಹೆತ್ತವರಿಗೆ ಈ ಕಪಲ್ ಗಳ ವರ್ತನೆ ಬಗ್ಗೆ ತಿಳಿಯೋದಿಲ್ಲ ಅಂತಾ ಹಿಂದು ಸಂಘಟನೆ ನಾಯಕರು ಆರೋಪಿಸಿದ್ದಾರೆ.

ಹೀಗಾಗಿ ಈ ಬಾರಿ ಯಾವುದೇ ಕಾರಣಕ್ಕೂ ರಾತ್ರಿ 11 ಗಂಟೆ ನಂತರದ ಪಾರ್ಟಿ, ಡಿಜೆ ಡ್ಯಾನ್ಸ್ ಗಳಿಗೆ ಅವಕಾಶ ನೀಡಬಾರದು ಅನ್ನೋ ಕಿರಿಕ್ ಶುರುವಿಟ್ಟಿದೆ. ಹಿಂದು ಸಂಘಟನೆಗಳ ಎಚ್ಚರಿಕೆಗೆ ಪೊಲೀಸ್ ಕಮಿಷನರ್ ಕೂಡ ಸ್ಪಂದಿಸಿದ್ದು, ಮಧ್ಯರಾತ್ರಿ ಪಾರ್ಟಿಗಳಿಗೆ ಅವಕಾಶ ಕೊಡದಿರಲು ನಿರ್ಧರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ನ್ಯೂ ಇಯರ್ ಪಾರ್ಟಿ ಅರೇಂಜ್ ಮಾಡಿದ್ದ ರೆಸ್ಟೋರೆಂಟ್, ಸ್ಟಾರ್ ಹೊಟೇಲ್‍ಗಳ ವ್ಯವಸ್ಥಾಪಕರು ಹಿಂದೂ ಸಂಘಟನೆಗಳ ಎಚ್ಚರಿಕೆಯಿಂದ ಚಿಂತೆಗೆ ಬಿದ್ದಿದ್ದಾರೆ. ಇಂಥ ಪಾರ್ಟಿಗಳಿಗೆ 3 ರಿಂದ 5, 10 ಸಾವಿರದ ವರೆಗೆ ಮೊದಲೇ ಬುಕ್ಕಿಂಗ್ ಮಾಡೋ ವ್ಯವಸ್ಥೆ ಇರುವುದರಿಂದ ಹಿಂದೂ ಸಂಘಟನೆಗಳ ಕೊನೆಕ್ಷಣದ ಎಚ್ಚರಿಕೆ ಸವಾಲಾಗಿ ಪರಿಣಮಿಸಿದೆ.

ಒಟ್ಟಿನಲ್ಲಿ ಈ ಬಾರಿ ಹಿಂದೂ ಸಂಘಟನೆಗಳು ಪೊಲೀಸರಿಗೆ ಹೇಳಿಯೇ ನೈತಿಕ ಪೊಲೀಸ್‍ಗಿರಿ ನಡೆಸಲಿದ್ದಾರೆ ಅನ್ನುವುದು ಹೊಸ ವಿಚಾರ. ಹೀಗಾಗಿ ಈ ಸಲದ ನ್ಯೂ ಇಯರ್ ಪಾರ್ಟಿಗೆ ದೂರದಿಂದ ಬರೋರು ಎಚ್ಚರಿಕೆ ವಹಿಸಬೇಕಾಗಿದೆ.

Comments

Leave a Reply

Your email address will not be published. Required fields are marked *