ತಂಪು ಪಾನೀಯದಲ್ಲಿ ಮತ್ತು ಬರೋ ಔಷಧಿ ಬೆರೆಸಿ ನಾಯಕ ನಟನಿಂದ ಅತ್ಯಾಚಾರ!

ಬೆಂಗಳೂರು: ತಂಪು ಪಾನೀಯದಲ್ಲಿ ಮತ್ತು ಬರೋ ಔಷಧಿ ಬೆರೆಸಿ ಹೊಂಬಣ್ಣ ಚಿತ್ರದ ನಾಯಕ ನಟ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿಯೊಬ್ಬರು ದೂರು ನೀಡಿದ್ದಾರೆ.

ಹೊಂಬಣ್ಣ ಚಿತ್ರದ ನಾಯಕ ಸುಬ್ರಮಣ್ಯ ನನಗೆ ತಂಪು ಪಾನೀಯದಲ್ಲಿ ಮತ್ತು ಬರೋ ಔಷಧಿ ಬೆರೆಸಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸಂತ್ರಸ್ತೆ ದೂರು ನೀಡಿ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಸುಬ್ರಮಣ್ಯ ಬೆಂಗಳೂರು ಬಿಟ್ಟು ಪರಾರಿಯಾಗಿದ್ದಾನೆ. ಸುಬ್ರಮಣ್ಯ ಮೂಲತಃ ತೀರ್ಥಹಳ್ಳಿಯವನಾಗಿದ್ದು, ಹೊಂಬಣ್ಣ ಚಿತ್ರದಲ್ಲಿ ನಾಯಕನಟನಾಗಿ ಅಭಿನಯಿಸಿದ್ದಾನೆ.

ದೂರಿನಲ್ಲಿ ಏನಿದೆ?
ಕಳೆದ 2 ವರ್ಷಗಳಿಂದ ನನಗೂ ನಮ್ಮ ಕುಟುಂಬದವರಿಗೆ ಸುಬ್ರಮಣ್ಯನ ಪರಿಚಯವಿದೆ. ಕುಟುಂಬದವರ ಜೊತೆ ಮಾತನಾಡಿ ಮದುವೆಯಾಗುವುದಾಗಿ ಹೇಳಿದ್ದ. ಈ ವಿಚಾರ ಆತನ ಪೋಷಕರಿಗೂ ತಿಳಿದಿತ್ತು. ಮದುವೆ ಮಾಡಿಕೊಳ್ಳೋಣ ಎಂದಿದ್ದಕ್ಕೆ ನನ್ನ ಸಿನಿಮಾ ಈ ವರ್ಷದ ಜುಲೈ 7 ರಂದು ಬಿಡುಗಡೆಯಾಗಲಿದೆ. ಚಿತ್ರ ಬಿಡುಗಡೆಯಾದ ಬಳಿಕ ಮದುವೆ ಆಗುತ್ತೇನೆ ಎಂದು ಹೇಳಿದ್ದ. ಸಿನಿಮಾ ರಿಲೀಸ್ ಆದ ಮೇಲೆ ನಮ್ಮ ಮನೆಯ ಗೃಹಪ್ರವೇಶ ಕಾರ್ಯಕ್ರಮ ನಡೆಯಲಿ. ಆಮೇಲೆ ನಿನ್ನನ್ನು ಮದುವೆ ಆಗುತ್ತೇನೆ ಎಂದು ಹೇಳಿ ದಿನ ದೂಡುತ್ತಿದ್ದ.

ನವೆಂಬರ್ 1 ರಂದು ನನ್ನ ಅಕ್ಕನ ಮನೆಯಲ್ಲಿ ಪಾರ್ಟಿ ಇದೆ ಎಂದು ಸುಳ್ಳು ಹೇಳಿ ಕರೆದುಕೊಂಡು ಹೋದ. ಮನೆಯವರಿಗೂ ಗೊತ್ತಿದೆ ಎಂದು ನಾನು ಹೋಗಿದ್ದೆ. ಆದರೆ ಆತ ಅಕ್ಕನ ಮನೆಗೆ ಬದಲು ತನ್ನ ರೂಮಿಗೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ಕುಡಿಯಲು ಜ್ಯೂಸ್ ಕೊಟ್ಟಿದ್ದಾನೆ. ಸ್ವಲ್ಪ ಸಮಯದ ನಂತರ ನನಗೆ ಪ್ರಜ್ಞೆ ತಪ್ಪಿತ್ತು. ಎಚ್ಚರವಾದಾಗ ಅವನ ಮತ್ತು ನನ್ನ ಮೈಮೇಲೆ ಬಟ್ಟೆ ಇರಲಿಲ್ಲ. ಈ ವೇಳೆ ಸುಬ್ರಮಣ್ಯ ನನ್ನನ್ನು ದೈಹಿಕವಾಗಿ ಬಳಸಿಕೊಂಡಿರುವುದು ತಿಳಿಯಿತು. ನನ್ನ ಅನುಮತಿ ಇಲ್ಲದೆ ಅತ್ಯಾಚಾರ ಮಾಡಿದ್ದಾನೆ. ನಾನು ಪ್ರಶ್ನೆ ಮಾಡಿದ್ದಕ್ಕೆ ನಿನ್ನನ್ನೇ ನಾನು ಮದುವೆಯಾಗುತ್ತೇನೆ ಸಮಾಧಾನವಾಗಿರು ಎಂದು ಹೇಳುತ್ತಿದ್ದ. ಆದರೆ ಕೆಲವು ದಿನಗಳಾದ ಬಳಿಕ ನನ್ನನ್ನು ನಿರ್ಲಕ್ಷ್ಯ ಮಾಡಲು ಪ್ರಾರಂಭಿಸಿದ್ದಾನೆ.

ಯಾಕೆ ನನ್ನನ್ನು ನೀನು ಮದುವೆಯಾಗುತ್ತಿಲ್ಲ ಎಂದು ಕೇಳಿದಾಗ ನನಗೆ 20 ಲಕ್ಷ ರೂ. ಹಾಕಿ ಸಿನಿಮಾ ತೆಗೆಯುವಂತಹ ಹುಡುಗಿ ಬೇಕು ನೀವು ಬಡವರು ಎಂದು ಹೇಳಿದ್ದಾನೆ. ಅಷ್ಟೇ ಅಲ್ಲದೇ ಸಿನಿಮಾ ರಂಗದವರು ಬಂದರೆ ಅವರ ಜೊತೆ ಸಹಕರಿಸು ಎಂದು ಹೇಳಿದ್ದ. ಆದರೆ ಇದಕ್ಕೆ ನಾನು ನಿರಾಕರಿಸಿದೆ. ನಂತರ ಇಲ್ಲಸಲ್ಲದ ಆರೋಪ ಮಾಡಿ ನನಗೆ ಮತ್ತು ನನ್ನ ಕುಟುಂಬದವರ ತೇಜೋವಧೆ ಮಾಡಿದ್ದಾನೆ. ಇದೆಲ್ಲವನ್ನು ಪ್ರಶ್ನೆ ಮಾಡಿದ್ದಕ್ಕೆ ನನಗೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Comments

Leave a Reply

Your email address will not be published. Required fields are marked *