ಸೋನಿಯಾ ಗಾಂಧಿ ಹೇಳಿದ್ದು ಸರಿಯಲ್ಲ ಎಂದು ಹೇಳಿ ನೋಡೋಣ: ಸಿಎಂಗೆ ಪ್ರತಾಪ್ ಸಿಂಹ ಪ್ರಶ್ನೆ

ಬೆಂಗಳೂರು: ಈ ಹಿಂದೆ ಮಹದಾಯಿ ನದಿ ನೀರನ್ನು ತಿರುವಲು ಬಿಡುವುದಿಲ್ಲ ಎಂದು ಸೋನಿಯಾ ಗಾಂಧಿ ಹೇಳಿದ್ದು ಸರಿಯಲ್ಲ ಎನ್ನಿ ನೋಡೋಣ ಎಂದು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯನವರನ್ನು ಮೈಸೂರಿನ ಸಂಸದ ಪ್ರತಾಪ್ ಸಿಂಹ ತರಾಟೆಗೆ ತೆಗೆದುಕೊಂಡಿದ್ದಾರೆ.

ಸಿಎಂ ಸಿದ್ದರಾಮಯ್ಯನವರು ಡಿಸೆಂಬರ್ 24 ರಂದು, ಯಡಿಯೂರಪ್ಪನವರಿಗೆ ಜನತೆಯ ಬಗ್ಗೆ ಕಾಳಜಿ ಇದ್ದರೆ ಕುಡಿಯುವ ನೀರಿನ ಉದ್ದೇಶಕ್ಕೆ 7.56 ಟಿ.ಎಂ.ಸಿ ನೀರು ಕೊಡಲು ನಾವು ಒಪ್ಪಿದ್ದೇವೆ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರಿಂದ ಅಫಿಡವಿಟ್ ಬರೆಸಿ ಮಹದಾಯಿ ನ್ಯಾಯಮಂಡಳಿಗೆ ಸಲ್ಲಿಸಲಿ. ಅದನ್ನು ಬಿಟ್ಟು ಯಡಿಯೂರಪ್ಪ ಅವರು ಜನತೆಯ ಮುಂದೆ ಬೇಜವಾಬ್ದಾರಿಯ ಮಾತುಗಳನ್ನು ಆಡುವುದು ಸರಿಯಲ್ಲ ಎಂದು ಟ್ವೀಟ್ ಮಾಡಿದ್ದರು.

ಈ ಟ್ವೀಟ್ ಗೆ ಪ್ರತಿಯಾಗಿ ಪ್ರತಾಪ್ ಸಿಂಹ, ನಿಮಗೆ ಕನ್ನಡಿಗರ ಬಗ್ಗೆ ಕಾಳಜಿಯಿದ್ದರೆ, ಗೋವಾ ಕಾಂಗ್ರೆಸ್ ಅಧ್ಯಕ್ಷರ ಹೇಳಿಕೆಯನ್ನು ಖಂಡಿಸಿ ಹಾಗೂ ಎಂದು ಸೋನಿಯಾ ಗಾಂಧಿ ಹೇಳಿದ್ದು ಸರಿಯಲ್ಲ ಎನ್ನಿ ನೋಡೋಣ ಎಂದು ಖಾರವಾಗಿ ಪ್ರಶ್ನಿಸಿ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಮಹದಾಯಿ ನದಿ ನೀರಿಗೆ ಗೋವಾ ಕ್ಯಾತೆ ಯಾಕೆ? ಆರಂಭದಿಂದ ಇಲ್ಲಿಯವರೆಗೆ ಏನಾಗಿದೆ? ಮೋದಿ, ಸೋನಿಯಾ ಗಾಂಧಿ ಹೇಳಿದ್ದು ಏನು? ಇಲ್ಲಿದೆ ಸಂಪೂರ್ಣ ಮಾಹಿತಿ

ಈ ಪ್ರಶ್ನೆಯ ಜೊತೆ ಪ್ರತಾಪ್ ಸಿಂಹ 4 ಪ್ರಶ್ನೆಗಳಿರುವ ಫೋಟೋಗಳನ್ನು ಹಾಕಿ ಸಿಎಂ ಸಿದ್ದರಾಮಯ್ಯನವರನ್ನು ಪ್ರಶ್ನಿಸಿದ್ದಾರೆ.

1. 2007ರ ಗೋವಾ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕ ರಾಜ್ಯಕ್ಕೆ ಒಂದು ಹನಿ ನೀರನ್ನು ಕೊಡುವುದಿಲ್ಲ ಎಂದಿದ್ದ ಕಾಂಗ್ರೆಸ್ ನಾಯಕಿ ಶ್ರೀಮತಿ ಸೋನಿಯಾ ಗಾಂಧಿ ನಿಮ್ಮವರಲ್ಲವೇ?

2. ಮಾತುಕತೆಯಲ್ಲಿ ಬಗೆಹರಿಸದೇ 2009ರಲ್ಲಿ ಮಹದಾಯಿ ವಿವಾದವನ್ನು ನ್ಯಾಯಾಧಿಕರಣದ ಮುಖಾಂತರ ಬಗೆಹರಿಸುವಂತೆ ಸುಪ್ರೀಂ ಕೋರ್ಟ್ ನಲ್ಲಿ ಅಫಿಡವಿಟ್ ಸಲ್ಲಿಸಿದ್ದು ಯಾರು?

3. ಮಾನ್ಯ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ 100 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ 5.5 ಕಿ.ಮೀ ಮಹದಾಯಿ ಮತ್ತು ಮಲಪ್ರಭಾ ಜೋಡಣಾ ಕಾಲುವೆಗೆ 2014-15 ರಲ್ಲಿ ತಡೆಗೋಡೆ ನಿರ್ಮಿಸಿದ್ದು ಯಾರು?

4. ಬೆಂಗಳೂರಿನಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ನೀವು ಹೇಳಿದಂತೆ ಗೋವಾ ಕಾಂಗ್ರೆಸ್ ನಾಯಕರನ್ನು ಒಪ್ಪಿಸುತ್ತೇವೆಂದು ನುಡಿದಂತೆ ನಡೆಯುತ್ತಿಲ್ಲ ಏಕೆ?

ಸೋನಿಯಾ ಗಾಂಧಿ ಹೇಳಿದ್ದು ಏನು?
2007ರ ಗೋವಾ ಚುನಾವಣಾ ಪ್ರಚಾರದ ವೇಳೆ ಮಾರ್ಗೋ ದಲ್ಲಿ ಭಾಷಣ ಮಾಡಿದ ಸೋನಿಯಾ ಗಾಂಧಿ, ಯಾವುದೇ ಕಾರಣಕ್ಕೂ ಮಹದಾಯಿ ನದಿ ತಿರುವಲು ಬಿಡುವುದಿಲ್ಲ. ಗೋವಾ ಕಾಂಗ್ರೆಸ್ ಮೇಲೆ ನೀವು ನಂಬಿಕೆ ಇಡಿ ಎಂದು ಅವರು ಆಶ್ವಾಸನೆ ನೀಡಿದ್ದರು.  ಇದನ್ನೂ ಓದಿ: ಪ್ರತಾಪ್ ಸಿಂಹ ವಿರುದ್ಧ ಐಪಿಸಿ ಸೆಕ್ಷನ್ 188 ಸೇರಿಸಿ ಪೇಚಿಗೆ ಸಿಲುಕಿದ ಖಾಕಿಗಳು!

Comments

Leave a Reply

Your email address will not be published. Required fields are marked *