ತಲೆಗೆ ಗನ್ ಇಟ್ಟು ಬ್ಯಾಗಿಗೆ ಹಣ ತುಂಬುವಂತೆ ಬೆದರಿಸಿದ್ರೂ ದರೋಡೆ ತಪ್ಪಿಸಿ ಸಾಹಸ ಮೆರೆದ ಮಹಿಳಾ ಸಿಬ್ಬಂದಿ

ಕಾನ್ಪುರ: ತಲೆಗೆ ಗನ್ ಇಟ್ಟು ಬ್ಯಾಗಿಗೆ ಹಣ ತುಂಬುವಂತೆ ಬೆದರಿಸಿದ್ದರೂ ಮಹಿಳಾ ಸಿಬ್ಬಂದಿಯೊಬ್ಬರು ಹೆದರದೆ ಬ್ಯಾಂಕ್ ದರೋಡೆಯನ್ನು ತಪ್ಪಿಸಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ಬ್ಯಾಂಕಿನ ಸಹಾಯಕ ಮ್ಯಾನೇಜರ್ ರೀನಾ ಚೌಧರಿ ಅವರು ಈ ಸಾಹಸ ಮಾಡಿದ್ದಾರೆ. ದರೋಡೆಕೋರನೊಬ್ಬ ಅವರ ತಲೆಗೆ ಗನ್ ಇಟ್ಟಿದ್ದರೂ, ಅವನನ್ನು ಪಕ್ಕಕ್ಕೆ ತಳ್ಳಿ ದರೋಡೆಯ ಸಂಚನ್ನು ತಪ್ಪಿಸಿದ್ದಾರೆ.

ನಡೆದಿದ್ದೇನು?
ರೀನಾ ಚೌಧರಿ ಬರೋಡಾ ಉತ್ತರ ಪ್ರದೇಶ ಗ್ರಾಮೀಣ ಬ್ಯಾಂಕ್ ಬರ್ರ ಬ್ರಾಂಚ್‍ನಲ್ಲಿ ಸಹಾಯಕ ಮ್ಯಾನೇಜರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶುಕ್ರವಾರ ಮಧ್ಯಾಹ್ನ ಸುಮಾರು 12:50 ವೇಳೆಗೆ ಒಬ್ಬ ಮುಖಕ್ಕೆ ಮುಸುಕು ಧರಿಸಿಕೊಂಡು ಗುಂಡು ಹಾರಿಸಿ ನಂತರ ರೀನಾ ಚೌಧರಿ ಕ್ಯಾಬಿನಿಗೆ ಗನ್ ಹಿಡಿದು ನುಗ್ಗಿದ್ದ. ನಂತರ ಚೌಧರಿ ತಲೆಗೆ ಗನ್ ಇಟ್ಟು, ಎಲ್ಲಾ ಹಣವನ್ನೂ ನಾನು ತಂದಿದ್ದ ಬ್ಯಾಗ್‍ಗೆ ತುಂಬುವಂತೆ ಬೆದರಿಸಿದ್ದಾನೆ. ಆಗ ಚೌಧರಿ ಹೇಗಾದರೂ ಮಾಡಿ ದರೋಡೆ ತಪ್ಪಿಸಬೇಕು ಹಾಗೂ ಒಳಗೆ ಮತ್ತು ಹೊರಗಿರುವ ಜನರನ್ನು ಎಚ್ಚರಿಸಬೇಕೆಂದು ಉಪಾಯದಿಂದ ದರೋಡೆಕೋರನನ್ನು ಪಕ್ಕಕ್ಕೆ ತಳ್ಳಿ ತಮ್ಮ ಟೇಬಲ್ ಬಳಿಯಿದ್ದ ಸೈರನ್ ಬಟನ್ ಒತ್ತಿದ್ದಾರೆ.

ಸೈರನ್ ಶಬ್ದ ಕೇಳಿದ ತಕ್ಷಣ ಬ್ಯಾಂಕ್ ಒಳಗಡೆ ಇದ್ದ ಇತರ ಸಿಬ್ಬಂದಿ ಹಾಗೂ ಹೊರಗಡೆಯಿದ್ದ ಸ್ಥಳೀಯರು ಎಚ್ಚೆತ್ತುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮುಂಚಿತವಾಗಿ ದರೋಡೆಕೋರ ಮತ್ತೊಬ್ಬನನ್ನು ಬ್ಯಾಂಕ್ ಹೊರಗಡೆ ಬೈಕಿನಲ್ಲಿ ಕಾಯುವಂತೆ ತಿಳಿಸಿ ಬಂದಿದ್ದನು. ಸೈರನ್ ಆದ ತಕ್ಷಣ ತಪ್ಪಿಸಿಕೊಳ್ಳಲು ಅವನ ಬಳಿಗೆ ಓಡಿ ಹೋಗಿದ್ದಾನೆ ಎಂದು ಸೀನಿಯರ್ ಸೂಪರಿಟೆಂಡೆಂಟ್ ಪೊಲೀಸ್ ಅಖಿಲೇಶ್ ಮೇನಾ ತಿಳಿಸಿದರು.

ಬ್ಯಾಂಕ್ ಸಿಬ್ಬಂದಿ ಸುತ್ತಮುತ್ತಲಿನ ಸ್ಥಳೀಯರಿಗೆ ಎಚ್ಚರಿಗೆ ನೀಡಿದ್ದಾರೆ. ಆದ್ದರಿಂದ ಸ್ಥಳಿಯರು ಇಬ್ಬರು ದರೋಡೆ ಕೋರರನ್ನು ಹಿಡಿದು ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತ ಖದೀಮರನ್ನು ವಿಜಯ್ ಪಾಂಡ್ಯಾ (23) ಹಾಗೂ ಜ್ಞಾನೇಂದ್ರ ಶ್ರೀವಾಸ್ತವ್ ಎಂದು ಗುರುತಿಸಲಾಗಿದ್ದು, ಇಬ್ಬರು ನೌಬಸ್ತಾ ನಿವಾಸಿಗಳು ಎಂದು ತಿಳಿದು ಬಂದಿದೆ.

Comments

Leave a Reply

Your email address will not be published. Required fields are marked *