ಭಕ್ತರ ಬಟ್ಟೆ ಕಳ್ಳತನ ಆರೋಪಿಸಿ ಜೋಗಮ್ಮನ ಮೇಲೆ ರಾಕ್ಷಸರಂತೆ ಹಲ್ಲೆ ಮಾಡಿದ ಗಾರ್ಡ್ ಗಳು

ಕೊಪ್ಪಳ: ರಕ್ಷಣೆ ನೀಡಬೇಕಿದ್ದ ಗಾರ್ಡ್ ಗಳೇ ರಾಕ್ಷಸರಂತೆ ವರ್ತಿಸಿದ ಘಟನೆ ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ.

ಕೊಪ್ಪಳ ತಾಲೂಕಿನ ಹುಲಗಿ ದೇವಸ್ಥಾನದ ಗಾರ್ಡ್ ಗಳು ದೇವಸ್ಥಾನಕ್ಕೆ ಬಂದ ಜೋಗಮ್ಮನ ಮೇಲೆ ಅಮಾನುಷ ರೀತಿಯಲ್ಲಿ ಹಲ್ಲೆ ಮಾಡಿ ರಾಕ್ಷಸರಂತೆ ನಡೆದುಕೊಂಡಿದ್ದಾರೆ. ಬಳ್ಳಾರಿ ಜಿಲ್ಲೆಯ ಸಂಡೂರ ತಾಲೂಕಿನ ತಾರಾನಗರ ನಿವಾಸಿಯಾಗಿರುವ ಶಿವಗಂಗಮ್ಮ ಎಂಬ ಜೋಗಮ್ಮ, ತಮ್ಮ ಆರಾಧ್ಯ ದೇವಿಯಾಗಿರುವ ಹುಲಿಗೆಮ್ಮನ ದರ್ಶನಕ್ಕೆ ಬಂದಿದ್ದರು.

ಎಂದಿನಂತೆ ಕಳೆದ 12ನೇ ತಾರೀಖಿನಂದು ದೇವಿಯ ದರ್ಶನಕ್ಕೆ ಬಂದು ರಾತ್ರಿ ದೇವಸ್ಥಾನದ ಆವರಣದಲೇ ತಂಗಿದ್ದಾಗ, ಅದ್ಯಾರದ್ದೋ ಭಕ್ತರ ಬಟ್ಟೆಗಳು ಕಳುವಾಗಿವೆ ಎಂದು ವಿಚಾರಣೆ ನೆಪದಲ್ಲಿ ಇಳಿವಯಸ್ಸಿನ ಜೋಗಮ್ಮಳನ್ನು ರೂಮಿಗೆ ಕರೆದುಕೊಂಡು ಹೋಗಿ ರಾಡು, ಬಡಿಗೆಯಿಂದ ಥಳಿಸಿದ್ದಾರೆ. ತಾಯಿ ವಯಸ್ಸಿನ ಮಹಿಳೆ ಎಂದು ಲೆಕ್ಕಿಸದೇ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ.

ಗಾರ್ಡ್ ಗಳ ಹೊಡೆತಕ್ಕೆ ಜೋಗಮ್ಮ ಅಲ್ಲೇ ಮೂರ್ಛೆ ಹೋಗಿದ್ದಾರೆ. ಎಚ್ಚರವಾದ ಬಳಿಕ ತನ್ನ ಎಡಗೈ ಮತ್ತು ಎರಡು ಬೆರಳುಗಳು ಮುರಿದು ಹೋಗಿದ್ದು ಮತ್ತು ಬೆನ್ನಿನ ಭಾಗದಲ್ಲಿ ಸಂಪೂರ್ಣವಾಗಿ ರಕ್ತ ಹೆಪ್ಪುಗಟ್ಟಿತ್ತು. ತೀವ್ರ ಅಸ್ವಸ್ಥರಾಗಿದ್ದ ಜೋಗಮ್ಮನ ಸ್ಥಿತಿಯನ್ನು ಕಂಡು ಹಲ್ಲೆ ಮಾಡಿದ ಗಾರ್ಡ್ ಗಳೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಮಾಡಿಸಿದ್ದಾರೆ.

ನಂತರ ಎಲ್ಲಿ ಜೋಗಮ್ಮ ಬೇರೆಯವರಿಗೆ ಬಾಯಿ ಬಿಡುತ್ತಾರೆ ಎಂದು ಆಸ್ಪತ್ರೆಯಿಂದ ಕರೆದುಕೊಂಡು ಬಂದು ದೇವಸ್ಥಾನದಲ್ಲೇ ಇದ್ದ ಒಂದು ರೂಮಿನಲ್ಲಿ ಕೂಡಿಹಾಕಿದ್ದಾರೆ. ನಾವು ಹೊಡೆದಿದ್ದೇವೆ ಎಂದು ಎಲ್ಲಿಯೂ ಹೇಳಬಾರದು. ಯಾರೋ ಭಕ್ತರು ಹಲ್ಲೆ ಮಾಡಿದ್ದಾರೆ ಎಂದು ಹೇಳಬೇಕು. ಇಲ್ಲದಿದ್ದರೆ ನಿನ್ನನ್ನು ಸಾಯಿಸಿಬಿಡುತ್ತೇವೆ ಎಂದು ಬೆದರಿಸಿದ್ದಾರೆ.

ರೂಮಿನಲ್ಲೇ ನರಳಾಡುತ್ತ ಬಿದ್ದಿದ್ದ ಜೋಗಮ್ಮರನ್ನು ನೋಡಿದ ಕೆಲ ಹುಲಗಿ ಸಾರ್ವಜನಿಕರು ಕೂಡಲೇ ಅಲ್ಲಿಂದ ಕರೆದುಕೊಂಡು ಬಂದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ನಡೆಸಿದಾಗ ದೇವಸ್ಥಾನದ ಗಾರ್ಡ್ ಗಳ ರಾಕ್ಷಸತನ ಬೆಳಕಿಗೆ ಬಂದಿದೆ. ಕೂಡಲೇ ಸ್ಥಳಿಯರು ಅಜ್ಜಿಯನ್ನು ಮುನಿರಾಬಾದ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಗಾರ್ಡ್ ಗಳು ಮಾಡಿದ ವರ್ತನೆಯನ್ನು ಖಂಡಿಸಿ ಸ್ಥಳೀಯರು ಮತ್ತು ಕರವೇ ಸಂಘಟಕರು ನೇರವಾಗಿ ದೇವಸ್ಥಾನದ ಆಡಳಿತ ಕಚೇರಿಗೆ ಬಂದು ಹಲ್ಲೆ ಮಾಡಿದ ಗಾರ್ಡ್ ಗಳಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

Comments

Leave a Reply

Your email address will not be published. Required fields are marked *