ಕಲ್ಯಾಣ ಮಂಟಪಕ್ಕೆ ನುಗ್ಗಿ ಡ್ರ್ಯಾಗರ್ ನಿಂದ ಎದೆಗೆ ಮೂರು ಬಾರಿ ಇರಿದು ಮಾಜಿ ಕಾರ್ಪೋರೇಟರ್ ಬರ್ಬರ ಕೊಲೆ

ಬೆಂಗಳೂರು: ಕಲ್ಯಾಣ ಮಂಟಪಕ್ಕೆ ನುಗ್ಗಿದ ದುಷ್ಕರ್ಮಿಗಳು ಡ್ರ್ಯಾಗರ್ ನಿಂದ ಎದೆಗೆ ಮೂರು ಬಾರಿ ಇರಿದು ಮಾಜಿ ಕಾರ್ಪೋರೇಟರ್ ಒಬ್ಬರನ್ನು ಕೊಲೆ ಮಾಡಿದ್ದಾರೆ.

ಗೋವಿಂದೇಗೌಡ ಕೊಲೆಯಾದ ಮಾಜಿ ಕಾರ್ಪೋರೇಟರ್. ಇಂದು ಸಂಜೆ ರಾಜಗೋಪಾಲನಗರದ ಮಾತೃಶ್ರೀ ಕಲ್ಯಾಣ ಮಂಟಪದಲ್ಲಿ ಮದುವೆಗೆ ಆಗಮಿಸಿದ್ದ ಗೋವಿಂದೇಗೌಡರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಹಲ್ಲೆಗೊಳಗಾದ ನಂತರ ಗೋವಿಂದೇಗೌಡರನ್ನು ಸುಂಕದಕಟ್ಟೆಯ ಲಕ್ಷ್ಮಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ.

ರಾಜಕೀಯ ವೈಷ್ಯಮ್ಯ: ಈ ಹಿಂದೆ ಹೆಗ್ಗನಹಳ್ಳಿ ವಾರ್ಡ್ ನಲ್ಲಿ ಕಾರ್ಪೋರೇಟರ್ ಆಗಿದ್ದರು. ಕಳೆದ ಬಾರಿ ಹೆಗ್ಗನಹಳ್ಳಿ ವಾರ್ಡ್ ಮಹಿಳೆಗೆ ಮೀಸಲಾಗಿದ್ದರಿಂದ ಪತ್ನಿಯನ್ನು ಚುನಾವಣೆಗೆ ನಿಲ್ಲಿಸಿದ್ದರು. ಆದರೆ ಈ ಮೊದಲು ಗೋವಿಂದೇಗೌಡರ ಗೆಲುವಿಗೆ ಶ್ರಮಿಸಿದ್ದ ಚಿಕ್ಕತಿಮ್ಮೇಗೌಡ ಎಂಬ ವ್ಯಕ್ತಿ ಕಳೆದ ಎಲೆಕ್ಷನ್ ನಲ್ಲಿ ಬಿಜೆಪಿಗೆ ಬೆಂಬಲ ಸೂಚಿಸಿದ್ದರು. ಹೀಗಾಗಿ ಗೋವಿಂದೇಗೌಡರ ಪತ್ನಿ ಚುನವಾಣೆಯಲ್ಲಿ ಸೋಲ ಬೇಕಾಯಿತು.

ಕೊಲೆಗೆ ಸುಪಾರಿ: ಚುನಾವಣೆ ಬಳಿಕ ಬೇರೆ ಪಕ್ಷಕ್ಕೆ ಬೆಂಬಲ ಸೂಚಿಸಿದ್ದ ಚಿಕ್ಕತಿಮ್ಮೇಗೌಡರ ಕೊಲೆಯಾಗಿತ್ತು. ಪತ್ನಿಯ ಸೋಲಿನಿಂದ ಕೋಪಗೊಂಡ ಗೋವಿಂದೇಗೌಡ ಸುಪಾರಿ ನೀಡಿ ಚಿಕ್ಕತಿಮ್ಮೇಗೌಡರ ಕೊಲೆ ಮಾಡಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಚಿಕ್ಕತಿಮ್ಮೇಗೌಡರ ಕೊಲೆಯ ನಂತರ ಅದೇ ಕೇಸಿನಲ್ಲಿ ಗೋವಿಂದೇಗೌಡರ ಬಂಧನವೂ ಆಗಿತ್ತು.

ಇತ್ತೀಚೆಗೆ ಬಿಡುಗಡೆಯಾಗಿ ಹೊರ ಬಂದಿದ್ದ ಗೋವಿಂದೇಗೌಡರಿಗೆ ಪೊಲೀಸರು ಕೆಲವು ನಿರ್ದಿಷ್ಟ ಏರಿಯಾ ಕಡೆ ತಲೆ ಹಾಕದಂತೆ ಸೂಚನೆ ಕೊಟ್ಟಿದ್ದರು. ಆದರೆ ಇಂದು ಮದುವೆಗೆ ಅಂತಾ ಬಂದಿದ್ದ ಗೋವಿಂದೇಗೌಡರ ಕೊಲೆಯಾಗಿದೆ. ಸ್ಥಳಕ್ಕೆ ರಾಜಗೋಪಾಲನಗರ ಪೊಲೀಸ್ರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೌವಿಂದೇಗೌಡ ಜೆಡಿಎಸ್ ಪಕ್ಷದಿಂದ ಈ ಭಾರಿ ವಿಧಾನಸಭೆ ಚುನಾವಣೆಗೆ ದಾಸರಹಳ್ಳಿ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದರು.

ಗೋವಿಂದೇಗೌಡರ ಕೊಲೆಯ ಬಳಿಕ ಹೆಗ್ಗನಹಳ್ಳಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ. 1 ಸಿಎಆರ್, 2 ಕೆಎಸ್‍ಆರ್‍ಪಿ ತುಕಡಿ ನಿಯೋಜನೆಗೊಂಡಿದ್ದು, ಮೂರು ಜನ ಎಸಿಪಿ, ಆರು ಜನ ಇನ್ಸ್ ಪೆಕ್ಟರ್ ಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ರಾಜಗೋಪಾಲನಗರ ಹಾಗೂ ಹೆಗ್ಗನಹಳ್ಳಿ ಮುಖ್ಯರಸ್ತೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದು, ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ ನಿಯೋಜನೆ ಮಾಡಲಾಗಿದೆ.

 

Comments

Leave a Reply

Your email address will not be published. Required fields are marked *