ಮುಸ್ಲಿಂ ಯುವಕನನ್ನ ಸಜೀವವಾಗಿ ದಹಿಸಿ, ಹುಡುಗಿಯನ್ನು ಕಾಪಾಡಲು ಆತನನ್ನು ಕೊಂದೆ ಎಂದ ಆರೋಪಿ

ಜೈಪುರ: ಇಡೀ ಸಮಾಜವೇ ತಲೆ ತಗ್ಗಿಸುವಂತ ಘಟನೆಯೊಂದು ರಾಜಸ್ಥಾನದ ರಾಜ್‍ಸ್ಮಂಡ್ ಜಿಲ್ಲೆಯಲ್ಲಿ ನಡೆದಿದೆ. ಲವ್ ಜಿಹಾದ್ ಹೆಸರಿನಲ್ಲಿ ದುಷ್ಕರ್ಮಿಯೋಬ್ಬ ಯುವಕನನ್ನು ಸಜೀವವಾಗಿ ಸುಟ್ಟು ಹಾಕಿದ್ದು, ಆತನನ್ನು ಗುರುವಾರದಂದು ಪೊಲೀಸರು ಬಂಧಿಸಿದ್ದಾರೆ. ಮತ್ತೊಂದು ವಿಡಿಯೋದಲ್ಲಿ, ನಾನು ಹುಡುಗಿಯನ್ನು ಕಾಪಾಡಲು ಆತನನ್ನು ಕೊಂದೆ ಎಂದು ಆರೋಪಿ ತನ್ನ ಹೀನ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾನೆ.

ಯುವಕನನ್ನು ಕೊಲೆ ಮಾಡಿ ಸುಟ್ಟು ಹಾಕಿದ್ದಲ್ಲದೇ ಕೃತ್ಯದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾನೆ. ಅಷ್ಟೇ ಅಲ್ಲದೇ ನಾನು ಅಪರಾಧ ಮಾಡಿದೆ ಎಂದು ಭಾವಿಸುವುದಿಲ್ಲ ಎಂದು ಆರೋಪಿ ಶಂಭುನಾಥ್ ರಾಯ್‍ಘರ್ ದೆಲ್ವಾರ ಪೊಲೀಸ್ ಠಾಣೆಯಲ್ಲಿ ಹೇಳಿದ್ದಾನೆ.

ಸಜೀವವಾಗಿ ದಹನವಾದ ಯುವಕನನ್ನು ಮೊಹಮ್ಮದ್ ಭಟ್ಟ ಶೇಖ್ ಎಂದು ಗುರುತಿಸಲಾಗಿದೆ. ಯುವಕನ ಕುಟುಂಬಕ್ಕೂ ಆರೋಪಿ ಜೀವ ಬೆದರಿಕೆ ಹಾಕಿದ್ದಾನೆ. ಈ ಪ್ರಕರಣ ಕುರಿತು ತನಿಖೆ ಮಾಡಲು ಗೃಹ ಮಂತ್ರಿ ವಿಶೇಷ ತನಿಖಾ ತಂಡವನ್ನು ನೇಮಿಸಿದ್ದಾರೆ ಎಂದು ಎಸ್‍ಪಿ ಮನೋಜ್ ಕುಮಾರ್ ತಿಳಿಸಿದ್ದಾರೆ.

ಏನಿದು ಪ್ರಕರಣ?: ಆರೋಪಿ ಶಂಭುನಾಥ್ ರಾಜ್‍ಸ್ಮಂಡ್ ನ ದೇವ್ ಹೆರಿಟೇಜ್ ರಸ್ತೆಯ ನಿರ್ಜನ ಪ್ರದೇಶಕ್ಕೆ ಮೊಹಮ್ಮದ್ ನನ್ನು ಬೈಕ್‍ನಲ್ಲಿ ಕರೆದುಕೊಂಡು ಹೋಗಿದ್ದಾನೆ. ನಂತರ ಬೈಕ್‍ನಿಂದ ಇಳಿದು ಮುಂದಕ್ಕೆ ಹೋಗುತ್ತಿದ್ದಂತೆ ಹಿಂದಿನಿಂದ ಆತನ ತಲೆಗೆ ಕೊಡಲಿಯಿಂದ ಹೊಡೆದಿದ್ದಾನೆ. ಮೊಹಮ್ಮದ್ ತಕ್ಷಣ ನೆಲಕ್ಕೆ ಬಿದ್ದಿದ್ದಾನೆ. ಬಳಿಕ ಆರೋಪಿ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾನೆ. ನಂತರ ಸೀಮೆಎಣ್ಣೆ ತಂದು ಸುರಿದು ಜೀವಂತವಾಗಿ ಸುಟ್ಟು ಹಾಕಿದ್ದಾನೆ. ಈ ಕೃತ್ಯವನ್ನು ತನ್ನ ಮೊಬೈಲ್ ಫೋನ್‍ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.

ಸಿಕ್ಕಿದ್ದು ಹೇಗೆ?: ಮೊದಲು ಪೊಲೀಸರಿಗೆ ಯುವಕ ಅರ್ಧ ಸುಟ್ಟ ಶವದ ಬಗ್ಗೆ ಮಾಹಿತಿ ಸಿಕ್ಕಿತ್ತು. ನಂತರ ಘಟನಾ ಸ್ಥಳಕ್ಕೆ ಎಸ್‍ಪಿ ಮನೋಜ್ ಕುಮಾರ್, ಎಎಸ್‍ಪಿ ಮನೀಷ್ ತ್ರಿಪಾಠಿ, ಡಿಎಸ್‍ಪಿ ರಾಜೇಂದ್ರ ಸೇರಿದಂತೆ ಸಿಬ್ಬಂದಿ ಭೇಟಿ ನೀಡಿದ್ದರು.

ಶವವನ್ನು ಪರಿಶೀಲನೆ ನಡೆಸಿದ ಪೊಲೀಸರು ಯವಕನನ್ನು ಕೊಲೆ ಮಾಡಿ ಸುಟ್ಟು ಹಾಕಿರಬಹುದೆಂದು ಅನುಮಾನ ವ್ಯಕ್ತಪಡಿಸಿದ್ದರು. ಘಟನಾ ಸ್ಥಳದಲ್ಲಿ ಹತ್ಯೆಗೆ ಬಳಸಿದ ಕೊಡಲಿ, ಕೊಲೆಗೀಡಾದ ಯುವಕನ ಬೈಕ್ ಮತ್ತು ಚಪ್ಪಲಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ಘಟನೆ ಕುರಿತಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾಗ ಕೊಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದಿದೆ.

ಪೊಲೀಸರು ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ಕೈಗೊಂಡಿದ್ದು, ಲವ್ ಜಿಹಾದ್‍ನಿಂದ ಯುವತಿಯನ್ನು ಉಳಿಸಲು ಈತನನ್ನು ಸುಟ್ಟಿದ್ದೇನೆ ಎಂದು ಆರೋಪಿ ವಿಡಿಯೋದಲ್ಲಿ ಹೇಳಿದ್ದಾನೆ. ಯಾರು ಲವ್ ಜಿಹಾದ್‍ಗೆ ಯತ್ನಿಸುತ್ತಾರೋ ಅವರಿಗೆಲ್ಲಾ ಇದೇ ಶಿಕ್ಷೆ ಕಾದಿದೆ ಎಂದು ಹೇಳಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

https://www.youtube.com/watch?v=VbI2ucA1tXU

https://www.youtube.com/watch?v=muHPYSsBctU

 

Comments

Leave a Reply

Your email address will not be published. Required fields are marked *