ಕೆಪಿಸಿಸಿ ಕಚೇರಿಗೆ ದಿಢೀರ್ ಭೇಟಿ ನೀಡಿದ ನಟ ರವಿಶಂಕರ್!

ಬೆಂಗಳೂರು: ಖ್ಯಾತ ಖಳನಟ, ಡೈಲಾಗ್ ಕಿಂಗ್ ರವಿಶಂಕರ್ ಇಂದು ದಿಢೀರ್ ಅಂತ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ್ದಾರೆ.

ಇತ್ತೀಚೆಗಷ್ಟೇ ಬಿಜೆಪಿ ಪಕ್ಷ ಸೇರಿಕೊಂಡಿದ್ದ ನಟ ಇಂದು ದಿಢೀರ್ ಅಂತ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿರುವುದು ಕುತೂಹಲ ಹುಟ್ಟಿಸಿದೆ. ಆದ್ರೆ ಈ ಬಗ್ಗೆ ರವಿಶಂಕರ್ ಸ್ಪಷ್ಟ ಪಡಿಸಿದ್ದು, ಸಿವಿಲ್ ಕೇಸ್ ಒಂದು ಇದ್ದ ಹಿನ್ನೆಲೆಯಲ್ಲಿ ಭೇಟಿ ನೀಡಿರುವುದಾಗಿ ಹೇಳಿದ್ದಾರೆ.

ನಟ ರವಿಶಂಕರ್ ಗೃಹ ಸಚಿವ ರಾಮಲಿಂಗಾ ರೆಡ್ಡಿಯವರನ್ನು ಭೇಟಿ ಮಾಡಲೆಂದು ಕೆಪಿಸಿಸಿ ಕಚೇರಿಗೆ ಬಂದಿದ್ದರು. ಆದ್ರೆ ಆ ಸಂದರ್ಭದಲ್ಲಿ ಸಚಿವರು ಅಲ್ಲಿ ಇಲ್ಲದ ಕಾರಣ ರವಿಶಂಕರ್ ವಾಪಾಸ್ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ನಟ ಸಾಯಿ ಕುಮಾರ್ ಸಹೋದರರಾಗಿರೋ ಇವರು ಇತ್ತೀಚೆಗಷ್ಟೇ ಬಿಜೆಪಿ ಸೇರುವ ಮೂಲಕ ಉಹಾಪೋಹಗಳಿಗೆ ತೆರೆ ಎಳೆದಿದ್ದರು. ಸಾಯಿ ಕುಮಾರ್ ಅವರು ಈಗಾಗಲೇ ಬಿಜೆಪಿ ಪಕ್ಷದ ಸದಸ್ಯರಾಗಿದ್ದಾರೆ. ಮೊದಲಿನಿಂದಲೂ ಬಿಜೆಪಿಯನ್ನು ಬೆಂಬಲಿಸುತ್ತಿದ್ದು, ಪಕ್ಷದ ಬಗ್ಗೆ ಒಲವು ಹೆಚ್ಚು ಇದ್ದುದರಿಂದ ತಾನು ಬಿಜೆಪಿಗೆ ಸೇರಿಕೊಂಡಿರುವುದಾಗಿ ಹೇಳಿದ್ದರು.

ತೆಲುಗು, ತಮಿಳು ಚಿತ್ರರಂಗದಲ್ಲಿ ಡಬ್ಬಿಂಗ್ ಕಲಾವಿದರಾಗಿ ಹೆಸರು ಮಾಡಿದ್ದ ರವಿಶಂಕರ್ ಅವರ ನಟನಾ ಪ್ರತಿಭೆಯನ್ನು ಕನ್ನಡ ಚಿತ್ರರಂಗ ಚಿತ್ರಲೋಕಕ್ಕೆ ಪರಿಚಯಿಸಿತ್ತು. ಹೀಗಾಗಿ ತನಗೆ ವೃತ್ತಿಜೀವನದಲ್ಲಿ ಮರುಹುಟ್ಟು ನೀಡಿದ ಕನ್ನಡ ಚಿತ್ರರಂಗದ ಮೇಲಿನ ವಿಶೇಷ ಅಭಿಮಾನದಿಂದ ನಟ ರವಿಶಂಕರ್ ಅವರು ತಮ್ಮ ಕುಟುಂಬ ವರ್ಗದವರೊಂದಿಗೆ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ.

Comments

Leave a Reply

Your email address will not be published. Required fields are marked *